ಮೈಸೂರು :ಮೊದಲಿನಿಂದಲೂ ಹಾವು-ಮುಂಗುಸಿಯಂತಿದ್ದ ಸಿದ್ದರಾಮಯ್ಯ- ಹೆಚ್. ವಿಶ್ವನಾಥ್ ಅವರ ರಾಜಕೀಯ ವೈಮನಸ್ಸು ಈಗಲೂ ಮುಂದುವರೆದಿದೆ. ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದ ವಿಶ್ವನಾಥ್, ಜೆಡಿಎಸ್ ಸೇರಿದ್ದಾಗಲೂ ಸಿದ್ದರಾಮಯ್ಯ ವಿರುದ್ಧ ಕೆಂಡಕಾರುತ್ತಲೇ ಇದ್ದರು. ಇನ್ನು ಜೆಡಿಎಸ್ ನಲ್ಲಿ ತಮಗೆ ಬೆಲೆ ಸಿಗುತ್ತಿಲ್ಲ ಎಂದು ತೆನೆ ಇಳಿಸಿ ಕಮಲ ಮೇಲೆ ಕುಳಿತುಕೊಂಡ ಹಳ್ಳಿಹಕ್ಕಿ, ಬಿಜೆಪಿ ಪರಿಷತ್ ಟಿಕೆಟ್ ತಪ್ಪಿದ್ದಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ ಎನ್ನುವಂತೆ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ.. ನನಗೆ ಟಿಕೆಟ್ ಕೈ ತಪ್ಪಿರುವ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಪಕ್ಷದ ಒಳಗಡೆ ಹಾಗೂ ಹೊರಗಡೆ ಪಿತೂರಿ ನಡೆದಿದ್ದು, ಸದ್ಯದಲ್ಲೇ ಎಲ್ಲವನ್ನು ಬಹಿರಂಗ ಪಡಿಸುತ್ತೇನೆ. ಪರಿಷತ್ ಚುನಾವಣೆಯ ಟಿಕೆಟ್ ಕೈ ತಪ್ಪಿದ್ದಕ್ಕೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಹೆಸರನ್ನು ತಳುಕುಹಾಕಿದ ವಿಶ್ವನಾಥ್, ಹೊರಗಡೆ ವಿರೋಧಿಗಳ ಪಾತ್ರವೂ ಇದೆ ಎಂದಿದ್ದಾರೆ.
ಒಟ್ಟಾರೆ ಸಾಮೂಹಿಕವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್- ಬಿಜೆಪಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ವಲಸಿಗರಲ್ಲಿ ಮೂರು ಮಂದಿಗೆ ಸರ್ಕಾರದಲ್ಲಿ ಯಾವುದೇ ಸ್ಥಾನ ಸಿಕ್ಕಿರಲಿಲ್ಲ. ಅವರಲ್ಲಿ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಗೆ ವಿಧಾನ ಪರಿಷತ್ ಚುನಾವಣಾ ಟಿಕೆಟ್ ನೀಡಲಾಗಿದೆ. ಹೆಚ್. ವಿಶ್ವನಾಥ್ ಅವರಿಗೆ ಟಿಕೆಟ್ ನೀಡಲು ಪಕ್ಷದಲ್ಲಿ ವಿರೋಧ ವ್ಯಕ್ತವಾದ ಕಾರಣ ಕೊನೆಕ್ಷಣದಲ್ಲಿ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ.