ಗಾಂಧಿ ಮಗ ಕುಡುಕನಾದ, ತಂದೆಯ ಗುಣ ಮಕ್ಕಳಿಗೆ ಬರುವುದಿಲ್ಲ : ಸಿದ್ದರಾಮಯ್ಯ
ಮೈಸೂರು : ಎಸ್.ಆರ್. ಬೊಮ್ಮಾಯಿ ಅವರ ಗುಣ ಮಗನಿಗೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿ ಮಗ ಕುಡುಕನಾದ, ತಂದೆಯ ಗುಣ ಮಕ್ಕಳಿಗೆ ಬರುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾ ಎಂದು ಪ್ರಶ್ನಿಸಿದರು. ಬಸವರಾಜ ಬೊಮ್ಮಾಯಿ ಹೆಸರು ಸೂಚಿಸಿರುವುದು ಯಡಿಯೂರಪ್ಪ. ಈ ಕಾರಣದಿಂದ ಸರ್ಕಾರದ ಮೇಲೆ ಯಡಿಯೂರಪ್ಪ ಸಹಜವಾಗಿ ಹಿಡಿತ ಹೊಂದಿರುತ್ತಾರೆ. ಹೀಗಿರುವಾಗ ಬೊಮ್ಮಾಯಿ ಸ್ವತಂತ್ರವಾಗಿ ಸರ್ಕಾರ ನಡೆಸಲು ಸಾಧ್ಯವೇ? ಆದ್ರೆ ಈ ಕ್ಷಣದಲ್ಲೇ ನಾನು ಬೊಮ್ಮಯಿ ಬಗ್ಗೆ ಏನೂ ಹೇಳುವುದಿಲ್ಲ. ಅವರ ಆಡಳಿತವನ್ನು ಕಾದು ನೋಡೋಣ. ಈಗಲೇ ಅವರ ಮೇಲೆ ಸುಮ್ಮನೆ ದೂರುವುದಿಲ್ಲ. ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಇನ್ನು ಎಸ್.ಆರ್. ಬೊಮ್ಮಾಯಿ ಅವರ ಗುಣ ಮಗನಿಗೆ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿ ಮಗ ಕುಡುಕನಾದ, ತಂದೆಯ ಗುಣ ಮಕ್ಕಳಿಗೆ ಬರುವುದಿಲ್ಲ. ಮಹಾತ್ಮ ಗಾಂಧಿಯ ಮಗ ಮಹಾತ್ಮ ಗಾಂಧಿಯಾಗಲಿಲ್ಲ. ಅದೇ ರೀತಿ ಬೊಮ್ಮಾಯಿ ಮಗ ತಂದೆಯಂತೆ ಆಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದುವರೆದು ಮುಖ್ಯಮಂತ್ರಿ ಬದಲಾದರೆ ಎಲ್ಲವೂ ಬದಲಾಗುತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಇಳಿದಿದ್ದಾರೆ, ಬೊಮ್ಮಾಯಿ ಸಿಎಂ ಆಗಿದ್ದಾರೆ. ಅಂದ ಮಾತ್ರಕ್ಕೆ ಬಿಜೆಪಿಯ ಐಡಿಯಾಲಜಿ ಬದಲಾಗುತ್ತಾ.? ಕೋಮುವಾದ ಹೊರಟು ಹೋಗುತ್ತಾ..? ಹಿಂದುತ್ವದ ಅವರ ಅಜೆಂಡಾ ಬದಲಾಗುತ್ತಾ.? ಎಂದು ಗುಡುಗಿದರು.
ಬಿಜೆಪಿಯವರು ಯಾವತ್ತಿಗೂ ಅಲ್ಪಸಂಖ್ಯಾತರು, ದಲಿತರು, ಬಡವರ ಪರವಾಗಿ ಇಲ್ಲ. ಆದ್ದರಿಂದ ಬಿಜೆಪಿ ಸರ್ಕಾರದಿಂದ ಯಾವುದೇ ನೀರೀಕ್ಷೆ ಮಾಡೋದಿಲ್ಲ. ಆದರೆ ಬಸವರಾಜ ಬೊಮ್ಮಾಯಿಗೆ ಒಂದು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಆಡಳಿತ ನೀಡಲಿ ಎಂದು ಸಿದ್ದರಾಮಯ್ಯ ನುಡಿದರು.