ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಆರಾಧಕ : ಸಿ.ಟಿ.ರವಿ ಟಾಂಗ್
ಬೆಂಗಳೂರು : ಟ್ವಿಟ್ಟರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಟ್ವೀಟ್ ವಾರ್ ಮುಂದುವರೆದಿದೆ.
ಆರ್ ಎಸ್ ಎಸ್ ಎಂದ ಕೂಡಲೇ ಉರಿದುಬೀಳುವ ಸಿ.ಟಿ.ರವಿ ಅವರೇ, ಆರ್ ಎಸ್ ಎಸ್ ಎಂದರೆ ಏನು? ಅದರ ಜೊತೆ ಬಿಜೆಪಿ ಸಂಬಂಧ ಏನು? ಆರ್ ಎಸ್ ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಿ.ಟಿ.ರವಿ, ಸಿದ್ದರಾಮಯ್ಯನವರೇ, ಆರ್‍ಎಸ್‍ಎಸ್ ಅಂದರೇನು ಎಂಬುದು ನಿಮ್ಮ ಘನ ಹೃದಯಕ್ಕೆ ಅರ್ಥವಾಗಬೇಕಾದರೆ ಮೊದಲು ನೀವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ಬರಬೇಕು.
ಆರ್‍ಎಸ್‍ಎಸ್ ಎಂಬುದನ್ನು ಹೊರಗಿನಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಏಕೆಂದರೆ ಅದು ಕೊಡುವ ಶಿಕ್ಷಣ, ಪ್ರೇರಣೆಯನ್ನು ಹತ್ತಿರದಿಂದ ನೋಡಿದಾಗ ನಿಮಗೆ ಅರ್ಥವಾಗಬಹುದು.
ನೀವು ಹತ್ತಿರಕ್ಕೆ ಬರದೇ ಸಂಘವನ್ನು ನೋಡುವುದು ‘ಅಂಧ ಆನೆಯನ್ನು ಮುಟ್ಟಿ ವರ್ಣಿಸಿದಂತಾಗುತ್ತದೆ’ ಆಗುತ್ತದೆ. ಹೀಗಾಗಿ ನೀವು ಸಂಘದ ಶಾಖೆಗೆ ಬನ್ನಿ ಸಂಘದ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತದೆ.

ನಿಮ್ಮ ಪಕ್ಷದಲ್ಲೇ ಕೇಂದ್ರದಲ್ಲಿ ವಿತ್ತ ಸಚಿವರಾಗಿ, 40 ವರ್ಷ ರಾಜಕೀಯ ಜೀವನದಲ್ಲಿ ಇದ್ದು 13ನೇ ರಾಷ್ಟ್ರಪತಿಯಾಗಿ ನಿಧನರಾದ ಪ್ರಣವ್ ಮುಖರ್ಜಿ ಅವರ ಜೀವನ ಚರಿತ್ರೆಯನ್ನು ಒಮ್ಮೆ ಓದಿ ಸಿದ್ದರಾಮಯ್ಯನವರೇ. ಆರ್‍ಎಸ್‍ಎಸ್ ಅಂದರೇನು ಎಂಬುದನ್ನು ಅವರು ವಿವರಿಸಿದ್ದಾರೆ. ಆಗಲಾದರೂ ಆರ್‍ಎಸ್‍ಎಸ್ ಬಗ್ಗೆ ನಿಮ್ಮ ಧೋರಣೆ ಬದಲಾಗಬಹುದು.
ಯುದ್ಧ,ಪ್ರವಾಹಗಳು ಈ ದೇಶದ ಯಾವುದೇ ಮೂಲೆಯಲ್ಲಿ ಘಟಿಸಿದಾಗ ಅಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರು ಮೊದಲು ಹಾಜರಾಗಿ ಸಂಕಷ್ಟದಲ್ಲಿರುವ ಜನರಿಗೆ ಸಾಹಾಯದ ಹಸ್ತವನ್ನು ಚಾಚುತ್ತಾರೆ. ಸ್ವಯಂಸೇವಕರು ತಮ್ಮ ಪ್ರಾಣವನ್ನು ಪಣವಾಗಿಟ್ಟು ರಕ್ಷಣೆ ಮಾಡುತ್ತಾರೆ. ಸಂಘದ ನಿಸ್ವಾರ್ಥ ಸೇವೆಯನ್ನು ತಾಲಿಬಾನಿಗೆ ಹೋಲಿಸಲು ನಿಮಗೆ ಮನಸ್ಸಾದರೂ ಹೇಗೆ ಬಂತು?
ಇತ್ತೀಚೆಗೆ ಯಾಕೋ ನಿಮ್ಮ ನಾಲಗೆಯ ಮೇಲೆ ತಾಲಿಬಾನಿ ಪದ ಹೆಚ್ಚು ಬಳಕೆಯಾಗುತ್ತಿದೆ. ನೀವೇನಾದರೂ ಅಲ್ಲಿಗೆ ಹೋಗುವ ಮನಸ್ಸು ಮಾಡಿದ್ದರೆ ಹೇಳಿ ಬಿಡಿ. ನಿಮ್ಮ ಮನೆಗೆ ನಾವು ಬಂದು ಅಲ್ಲಿಯ ಬಿಕ್ಕಟ್ಟು ಸಂಘದ ಸ್ವಾತಂತ್ರ್ಯದ ಬಗ್ಗೆ ಎಳೆ ಎಳೆಯಾಗಿ ವಿವರಿಸುತ್ತೇವೆ.
ಏನಂತೀರಿ ಟಿಪ್ಪು ಸುಲ್ತಾನ್ ಆರಾಧಕ ಸಿದ್ದರಾಮಯ್ಯನವರೇ?
ಕೊನೆಯದಾಗಿ, ನಾನೇನು ಎಂಬುದು ಚಿಕ್ಕಮಗಳೂರಿನ ನನ್ನ ಜನರಿಗೆ, ನನ್ನ ಜೊತೆ ಇರುವ ಕಾರ್ಯಕರ್ತರಿಗೆ ಗೊತ್ತು. ‘ಸ್ನೇಹಿತರೊಟ್ಟಿಗೆ ಸೇರಿ ಕುಡಿದು ತೇಲಾಡುತ್ತಿದ್ದವರು ಯಾರು ಎಂದು ಮೈಸೂರಿನ ನಾಗರೀಕರು ಈಗಲೂ ಮರೆತಿರಲಿಕ್ಕಿಲ್ಲ. ಒಮ್ಮೆ ಕೇಳಿ ನೋಡಿ ಸಿದ್ದರಾಮಯ್ಯನವರೇ.
ಬಿಜೆಪಿ ಮತ್ತು ಆರ್‍ಎಸ್‍ಎಸ್‍ಗೂ ಏನು ಸಂಬಂಧ ಎಂದು ಕೇಳಿದ್ದೀರಲ್ಲವೇ? ತಾಯಿ ಮತ್ತು ಮಕ್ಕಳ ಸಂಬಂಧ. ಅದು ಕಾರ್ಖಾನೆಯಲ್ಲ. ದೇಶವನ್ನು ಸಂಘಟಿಸಲು ಮತ್ತು ಗಟ್ಟಿಯಾಗಿ ಭಾರತವನ್ನು ಕಟ್ಟಲು ಕಾರ್ಯಕರ್ತರನ್ನು ರೂಪಿಸುವ ಶಿಸ್ತುಬದ್ಧ ಗರಡಿ ಮನೆ.
ಈ ದೇಶ ಜಾತ್ಯಾತೀತ ತತ್ವಗಳ ಮೇಲೆ ನಿಂತಿದೆ, ಸಂಘ ಯಾರನ್ನೂ ಗುತ್ತಿಗೆ ಪಡೆದಿಲ್ಲ.
ನಿಮ್ಮ ಪಕ್ಷದ ಉಳಿಗೆ ಮಾನ್ಯ ಪದ್ಧತಿಯನ್ನು ನೀವು ತೋರಿಸಿಕೊಟ್ಟಿದ್ದೀರಿ. ದೇಶ ಸೇವೆ ಮಾಡಬೇಕೆಂದರೆ ರಾಜಕೀಯಕ್ಕೆ ಬರಬೇಕೆಂದಿಲ್ಲ ಸಿದ್ದರಾಮಯ್ಯನವರೇ. ಬಲಹೀನರಿಗೆ ಬೆಳಕಾಗಲು ಸಂಘ ಕೊಟ್ಟ ಕೊಡುಗೆಗಳನ್ನು ನಾವು ತಿಳಿಸುತ್ತೇವೆ, ಒಮ್ಮೆ ಸಂಘದ ಶಾಖೆಗೆ ಬನ್ನಿ ಎಂದು ಸಿ.ಟಿ.ರವಿ ಬರೆದುಕೊಂಡಿದ್ದಾರೆ.








