ಉದ್ಯೋಗ ಕಳ್ಕೊಂಡು ಸಂಕಷ್ಟದಲ್ಲಿರುವ ವರ್ಗಕ್ಕೆ ನೆರವು ನೀಡಿ : ಸಿದ್ದರಾಮಯ್ಯ ಪತ್ರ
ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ನಾಳೆಯಿಂದ ಕಠಿಣ ಕ್ರಮಗಳನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳಿರುವುದರಿಂದ ಈಗಾಗಲೇ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ದುಡಿಯುವ ವರ್ಗಕ್ಕೆ ನೆರವಾಗುವಂತೆ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಸದ್ಯ ಬೇಡಿಕೆ ಇರುವುದಕ್ಕಿಂತ ಹೆಚ್ಚಿನ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ನಮ್ಮಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು. ಜಿಲ್ಲಾವಾರು ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಬೇಕು. ಆಕ್ಸಿಜನ್ ಸಿಲಿಂಡರ್ ಗಳು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆ ನಿಲ್ಲಿಸಿ ಮನೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೂ ಸುಲಭವಾಗಿ ಆಕ್ಸಿಜನ್ ಸಿಗುವಂತೆ ಮಾಡಬೇಕು.
ಆಕ್ಸಿಜನ್ ಉತ್ಪಾದನೆಯಾಗುತ್ತಿರುವ ಪ್ರದೇಶಗಳಲ್ಲೇ ಆಕ್ಸಿಜನ್ ಲಭ್ಯತೆಯ ಆಧಾರದ ಮೇಲೆ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಬೇಕು. ಜಿಲ್ಲಾವಾರು ಚಿಕಿತ್ಸೆ ಎಂಬ ಅವೈಜ್ಞಾನಿಕ ವಿಧಾನವನ್ನು ಕೈಬಿಟ್ಟು ಸುತ್ತಮುತ್ತಲ ಏಳೆಂಟು ಜಿಲ್ಲೆಗಳ ರೋಗಿಗಳನ್ನು ಒಂದು ಕಡೆ ತಂದು ಆಕ್ಸಿಜನ್ ನೀಡಿ ರಕ್ಷಿಸಬೇಕು. ಇದರಿಂದ ಒತ್ತಡ ಕಡಿಮೆಯಾಗುತ್ತದೆ.
ಖಾಸಗಿ ಆಸ್ಪತ್ರೆಗಳವರು ರೆಮ್ ಡಿಸಿವಿರ್ ಔಷಧಿ ತರುವಂತೆ ರೋಗಿಗಳಿಗೆ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಈ ಜೀವ ರಕ್ಷಕ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಪ್ರತಿ ರೋಗಿಗೆ ಕನಿಷ್ಟ ಮಟ್ಟದ ಮೊತ್ತವನ್ನು ನಿಗದಿಪಡಿಸಲಾಗಿದೆ. ಅದರಿಂದ ಸಮರ್ಪಕವಾಗಿ ರೆಮ್ ಡಿಸಿವಿರ್ ನಂತಹ ಔಷಧಗಳನ್ನು ನೀಡಲಾಗುತ್ತಿಲ್ಲ ಎಂಬ ಮಾಹಿತಿ ಇದೆ.
ಈ ಅವ್ಯವಸ್ಥೆಯನ್ನು ಸರಿ ಮಾಡಬೇಕು. ರಾಜ್ಯದ ಅಸಹಾಯಕ ರೋಗಿಗಳಿಗೆ ಸಾಮಾನ್ಯ, ಐ.ಸಿ.ಯು, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಇರುವ ಸಾಕಷ್ಟು ಬೆಡ್ ಗಳನ್ನು ಸ್ಥಾಪಿಸಲು ಯಾವ ಸಮಸ್ಯೆ ಇದೆ ಬೆಡ್ ಗಳು ಎಷ್ಟು ಬೇಕಾಗಬಹುದು ಎಂಬುದನ್ನು ಮೊದಲೇ ಅಂದಾಜಿಸಿ ಕಾರ್ಯೋನ್ಮಖರಾಗಬೇಕು. ವೈದ್ಯರುಗಳಿಗೆ ಸಂಬಂಧಿಸಿದಂತೆ, ಖಾಸಗಿ, ನಿವೃತ್ತರಾದವರನ್ನು ಅಗತ್ಯ ಬಿದ್ದರೆ ನೇಮಿಸಿಕೊಳ್ಳಬೇಕು. ದಾದಿಯರ ವಿಷಯದಲ್ಲೂ ಹಾಗೆ ಮಾಡಬೇಕು. ಈಗಾಗಲೇ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಂಡಿರುವ ಅಂತಿಮ ವರ್ಷಗಳಲ್ಲಿರುವ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ನಿಯೋಜಿಸಬೇಕು. ಲಸಿಕೆ ಹಾಕಿಸಿಕೊಳ್ಳದವರಿಗೆ ಆದ್ಯತೆಯ ಮೇಲೆ ಲಸಿಕೆ ಹಾಕಬೇಕು.
ಕಳೆದ ವರ್ಷ ತರಿಸಿದ ಸಾವಿರಗಟ್ಟಲೆ ವೆಂಟಿಲೇಟರ್ ಗಳನ್ನು ಬಳಸದೆ ಗೋಡೌನ್ ಗಳಲ್ಲಿ ಧೂಳು ತಿನ್ನಲು ಬಿಡಲಾಗಿದೆ ಎಂಬ ಮಾಹಿತಿ ಇದೆ. ಇದನ್ನು ಕ್ರಿಮಿನಲ್ ವರ್ತನೆ ಎನ್ನಬೇಕಾಗುತ್ತದೆ. ಅಗತ್ಯ ಬಿದ್ದರೆ ಕಲ್ಯಾಣ ಮಂಟಪ, ಕ್ರೀಡಾಂಗಣ, ಹಾಸ್ಟೆಲ್ ಗಳನ್ನು ತಾತ್ಕಾಲಿಕ ಆಸ್ಪತ್ರೆ ಮಾಡಿ ಚಿಕಿತ್ಸೆ ನೀಡಿ ಎಂದು ಸಲಹೆ ಇತ್ತಿದ್ದಾರೆ.
ಬೆಂಗಳೂರಿನ 4 ದಿಕ್ಕುಗಳಲ್ಲೂ ಖಾಲಿ ಜಾಗವನ್ನು ಹುಡುಕಿ ವ್ಯವಸ್ಥಿತವಾಗಿ ಶವ ಸಂಸ್ಕಾರ ನಡೆಸಬೇಕು. ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು. ಜನ ಉದ್ಯೋಗಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸರ್ಕಾರ ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ ನೀಡಬೇಕು. ಜೊತೆಗೆ ಬೇಳೆ, ಅಡುಗೆ ಎಣ್ಣೆ, ಮುಂತಾದ ದಿನಸಿ ಪದಾರ್ಥಗಳುಳ್ಳ ಕಿಟ್ ಗಳನ್ನು ನೀಡಬೇಕು.
ಪ್ರತಿ ಬಿಪಿಎಲ್ ಕುಟುಂಬಕ್ಕೆ ಮೊದಲಿಗೆ 10,000 ರೂ. ನೀಡಬೇಕು. ನಂತರ ತಿಂಗಳಿಗೆ 6,000 ರೂ.ನೀಡಬೇಕು. ರಾಜ್ಯದ ರೈತರಿಗೆ, ಕುಶಲಕರ್ಮಿ ಸಮುದಾಯಗಳಿಗೆ, ಕಾರ್ಮಿಕರಿಗೆ, ಡ್ರೈವರ್ ಗಳಾದಿಯಾಗಿ ಎಲ್ಲ ದುಡಿಯುವ ವರ್ಗಗಳಿಗೆ 10,000 ರೂ.ಗಳನ್ನು ನೀಡಬೇಕು. ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ ಕೈಗಾರಿಕೆಗಳಿಗೆ, ವಾಹನಗಳ ಮಾಲೀಕರ ಸಭೆಗಳನ್ನು ನಡೆಸಿ ಸೂಕ್ತ ಪ್ಯಾಕೇಜನ್ನು ನೀಡಬೇಕು ಎಂದಿದ್ದಾರೆ.
ನಗರಗಳಿಂದ ಹಳ್ಳಿಗಳಿಗೆ ದುಡಿಯುವ ಜನ ವಾಪಸಾಗಿದ್ದಾರೆ. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಅತ್ಯಂತ ಸಮರ್ಪಕವಾಗಿ ಬಳಸಬೇಕು. ಕನಿಷ್ಟ 200 ಮಾನವ ದಿನಗಳ ಯೋಜನೆಯನ್ನು ಜಾರಿಗೊಳಿಸಬೇಕು. ಅಗತ್ಯ ಇರುವ ಕಡೆ ಬೇಡಿಕೆಯನ್ನು ಆಧರಿಸಿ ಉದ್ಯೋಗ ನೀಡಬೇಕು. ಪ್ರಸ್ತುತ ಇರುವ ಹಣದುಬ್ಬರವನ್ನು ಆಧರಿಸಿ ನರೇಗಾ ಕೂಲಿ ಮೊತ್ತವನ್ನು ಪರಿಷ್ಕರಿಸಬೇಕು ಮತ್ತು ಹೆಚ್ಚಿಸಬೇಕು.
ನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ 4 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಈ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಎಲ್ಲ ಸಲಹೆಗಳನ್ನು ಗಂಭಿರವಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕೆಂದು, ಜನರಿಗೆ ಬಂದೊದಗಿರುವ ಸಂಕಟವನ್ನು ನಿವಾರಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.










