ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸುಪ್ರಸಿದ್ಧ ಸಿಗಂದೂರು ಕ್ಷೇತ್ರದ ಚೌಡೇಶ್ವರಿ ದೇವಸ್ಥಾನದಲ್ಲಿ ಉಂಟಾಗಿದ್ದ ಪೂಜಾ ವಿವಾದ ನ್ಯಾಯಾಲಯದ ಮಧ್ಯಸ್ಥಿಕೆಯೊಂದಿಗೆ ತಾತ್ಕಾಲಿಕ ಸುಖಾಂತ್ಯ ಕಂಡಿದೆ.
ದೇವಸ್ಥಾನದ ಧರ್ಮದರ್ಶಿ ರಾಮಪ್ಪ, ಅವರ ಪುತ್ರ ರವಿಕುಮಾರ್ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ರಾವ್ ನಡುವೆ ವಿವಾದ ಉಂಟಾಗಿತ್ತು.
ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ಅರ್ಚಕ ಶೇಷಗಿರಿ ಭಟ್ ಅವರಿಗೆ ಅಡ್ಡಿ ಮಾಡದಂತೆ ತಡೆ ಕೋರಿ ಭಕ್ತರಾದ ಸಂದೀಪ್ ಹಾಗೂ ನವೀನ್ ಜೈನ್ ಸಾಗರದ ಜೆಎಂಎಫ್ಸಿ ಕೋರ್ಟ್ನಲ್ಲಿ ನಿರ್ಬಂಧಕಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ ಶೇಷಗಿರಿ ಭಟ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಕೋರ್ಟ್ನ ನ್ಯಾಯಾಧೀಶರಾದ ಫೆಲಿಕ್ಸ್ ಅಲ್ಫಾನ್ಸೋ ಅಂತೋನಿ ರಾಜಿ ಸಂಧಾನದ ಮೂಲದ ವಿವಾದ ಬಗೆಹರಿಸಿಕೊಳ್ಳಲು ಸೂಚಿಸಿದ್ದರು.
ಕೋರ್ಟ್ ಸೂಚನೆ ಮೇರೆಗೆ ನ್ಯಾಯಾಲಯಕ್ಕೆ ದೂರುದಾರ ಸಂದೀಪ್, ನವೀನ್ ಜೈನ್, ಅರ್ಚಕ ಶೇಷಗಿರಿ ಭಟ್, ರಾಮಪ್ಪ, ರವಿಕುಮಾರ್ ಹಾಜರಾಗಿದ್ದರು. ಮಧ್ಯಸ್ಥಗಾರರ ಸಮ್ಮುಖದಲ್ಲಿ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.
ದಸರಾ ಅಂಗವಾಗಿ ನವರಾತ್ರಿಯ ದಿನಗಳಂದು ಹೋಮ-ಹವನಗಳನ್ನು ಅರ್ಚಕ ಶೇಷಗಿರಿ ಭಟ್, ಧರ್ಮದರ್ಶಿ ರಾಮಪ್ಪ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಕೋವಿಡ್ ಮಾರ್ಗದರ್ಶಿ ಸೂತ್ರಗಳ ಅನ್ವಯ ನಡೆಸಲು ತೀರ್ಮಾನಿಸಲಾಯಿತು.
ಕೊರೊನಾ ಸೋಂಕಿನ ಪಿಡುಗು ಕೊನೆಗೊಂಡ ನಂತರ ರಾಮಪ್ಪ, ರವಿಕುಮಾರ್, ಶೇಷಗಿರಿ ಭಟ್ ಪರಸ್ಪರ ಹೊಂದಾಣಿಕೆ ಮೂಲಕ ದೇವಿಯ ಪೂಜೆ ಹಾಗೂ ಇತರೆ ವಿಧಿವಿಧಾನಗಳನ್ನು ನಡೆಸಲು ಸಮ್ಮತಿ ಸೂಚಿಸಲಾಗಿದ್ದು, ಕೊರೊನಾ ಮುಗಿಯುವವರೆಗೆ ದೇವಸ್ಥಾನದಲ್ಲಿ ಏಕಕಾಲಕ್ಕೆ 40 ಮಂದಿ ಭಕ್ತರ ದರ್ಶನಕ್ಕೆ ಅವಕಾಶ ಹಾಗೂ ಆರತಿ ತಟ್ಟೆಯನ್ನು ಭಕ್ತರ ಬಳಿ ಕೊಂಡೊಯ್ಯದೆ ನಿರ್ಧಿಷ್ಟ ಸ್ಥಳದಲ್ಲಿ ಇಡಬೇಕು. ಕೊರೊನಾ ನಂತರ ರಾಮಪ್ಪ, ರವಿಕುಮಾರ್, ಶೇಷಗಿರಿ ಭಟ್ ಪೂಜೆ ಸೇರಿದಂತೆ ಧಾರ್ಮಿಕ ಚಟುವಟಿಕೆ ಮುಂದುವರೆಸಿಕೊಂಡು ಹೋಗಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ದೂರುದಾರರು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ಹೀಗಾಗಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪೂಜಾ ವಿವಾದಕ್ಕೆ ಸದ್ಯ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.