ಧಾರವಾಡ : ಸಂಪದ್ಭರಿತವಾದ ಕನ್ನಡ ಭಾಷೆಗೆ ಯಾವಾಗಲೂ ಗೆಲುವಾಗಲಿ ಎಂಬ ದೂರದೃಷ್ಟಿಯ ನೆಲೆಯಲ್ಲಿ ಕನ್ನಡ ಪರ ವಾತಾವರಣವನ್ನು ಹುಟ್ಟುಹಾಕಲು ‘ಸಿರಿಗನ್ನಡಂ ಗೆಲ್ಗೆ’ ಘೋಷವಾಕ್ಯವನ್ನು ಬರೆದು ಸಾರ್ವತ್ರಿಕಗೊಳಿಸಿದ ಕೀರ್ತಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ರಾ.ಹ.ದೇಶಪಾಂಡೆ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಹೇಳಿದರು.
ಅವರು ನಗರದ ಶ್ರೀಮತಿ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಸಂಸತ್ಗೆ ಚುನಾಯಿತಗೊಂಡ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಮ್ಮ ಸುತ್ತಣ ಇರಬಹುದಾದ ಚಾರಿತ್ರಿಕ ಘನತೆಯನ್ನು ಅರಿಯಲು ಪ್ರಯತ್ನಿಸಬೇಕು. ಬದ್ಧತೆಯಿಂದ ಅಧ್ಯಯನಕ್ಕೆ ತೆರೆದುಕೊಂಡಾಗ ಶ್ರೇಷ್ಠ ಸಾಧನೆ ಸಾಧ್ಯವಾಗುತ್ತದೆ ಎಂದರು.
ಮೂಲ ಧಾರವಾಡ ಶಕ್ತಿಸ್ಥಳ : ಕಾಮನಕಟ್ಟಿ, ಹೊಸಯಲ್ಲಾಪೂರ, ಹೆಬ್ಬಳ್ಳಿ ಅಗಸಿ ಒಳಗೊಂಡಂತೆ ಮೂಲ ಧಾರವಾಡದ ನೆಲ ಶಕ್ತಿ ಸ್ಥಳವಿದ್ದಂತೆ. ಹೊಸಯಲ್ಲಾಪೂರದ ‘ಮಂಗ್ಯಾನ ಮಹಲ್’ಗೆ ಸ್ವಾಮಿ ವಿವೇಕಾನಂದ, ಬಾಲಗಂಗಾಧರನಾಥ ಟಿಳಕ, ಡೆಪ್ಯೂಟಿ ಚೆನ್ನಬಸಪ್ಪ, ರೊದ್ದ ಶ್ರೀನಿವಾಸರಾವ್, ರಾ.ಹ.ದೇಶಪಾಂಡೆ, ಆಲೂರ ವೆಂಕಟರಾಯರು, ದ.ರಾ. ಬೇಂದ್ರೆ, ಬೆಟಗೇರಿ ಕೃಷ್ಣ ಶರ್ಮ ಅವರಂತಹ ದಿಗ್ಗಜರು ಭೇಟಿ ನೀಡಿರುವುದು ಮೂಲ ಧಾರವಾಡದ ನೆಲ ಶಕ್ತಿಸ್ಥಳವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದೂ ಡಾ. ನರೇಂದ್ರ ಹೇಳಿದರು.
ಇನ್ನೋರ್ವ ಅತಿಥಿ ಹಿರಿಯ ಇಂಜಿನೀಯರ್ ರವಿ ನಾಯಕ ಮಾತನಾಡಿ, ತಂತ್ರಜ್ಞಾನ ಇಂದಿನ ಅವಶ್ಯಕತೆ, ವಿದ್ಯಾರ್ಥಿಗಳು ಬದಲಾಗುತ್ತಿರುವ ಜಾಗತಿಕ ತಂತ್ರಜ್ಞಾನವನ್ನು ಅರಿತುಕೊಂಡು ತಮ್ಮನ್ನು ತಾವು ಜಾಗತಿಕ ಮಟ್ಟದಲ್ಲಿ ಸಮರ್ಥರನ್ನಾಗಿ ರೂಪಿಸಿಕೊಳ್ಳಬೇಕು ಎಂದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಿರಿಯ ವಕೀಲ ಅರುಣ ಚರಂತಿಮಠ ಅಧ್ಯಕ್ಷತೆವಹಿಸಿದ್ದರು. ಪ್ರಿನ್ಸಿಪಾಲ್ ಅಶ್ವಿನಿ ಚಿಕ್ಕಬಳ್ಳಾಪುರ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ವಿದ್ಯಾರ್ಥಿ ಸಂಸತ್ತಿನ ಸೃಷ್ಟಿ ಕನ್ನೆಗೌಡರ ಪ್ರಧಾನಮಂತ್ರಿಯಾಗಿ, ಸೃಷ್ಟಿ ಅಗಡಿ ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಡಾ. ಶಶಿಧರ ನರೇಂದ್ರ ಅವರನ್ನು ಗೌರವಿಸಲಾಯಿತು. ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ವಂದಿಸಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಇದ್ದರು.