ಬೆಂಗಳೂರು: ರಾಜಕಾಲುವೆಯಲ್ಲಿ ಆರು ವರ್ಷದ ಬಾಲಕಿ ಕೊಚ್ಚಿ ಹೋದ ಘಟನೆ ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದಿದೆ.
ಮಾರತ್‌ಹಳ್ಳಿಯ ಮಂತ್ರಿ ಅಪಾರ್ಟ್ಮೆಂಟ್ ಬಶಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಅಸ್ಸಾಂ ಮೂಲದ ನಿತ್ಯಾನಂದ ಎಂಬುವರ ಪುತ್ರಿ ಮೊನಾಲಿಕ(೬) ಕೊಚ್ಚಿ ಹೋಗಿದ್ದಾಳೆ.

ಮಧ್ಯಾಹ್ನ ೨ ಗಂಟೆ ಸುಮಾರಿಗೆ ರಾಜಕಾಲುವೆ ಬಳಿ ಮೊನಾಲಿಕಾ ಆಟವಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಕಾಲುವೆಗೆ ಬಿದ್ದಿದ್ದಾಳೆ. ಕೂಡಲೇ ಪೋಷಕರೂ ಧಾವಿಸಿದರೂ ನೀರಿನ ಸೆಳೆತಕ್ಕೆ ಬಾಲಕಿ ಕೊಚ್ಚಿಹೋಗಿದ್ದಾಳೆ. ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು, ಅಗ್ನಿಶಾಮಕ ದಳ ಭೇಟಿ ನೀಡಿದ್ದು, ಬಾಲಕಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ನಿನ್ನೆಯಿಂದ ರಾಜಧಾನಿ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ರಾಜಕಾಲುವೆಗಳು ಉಕ್ಕಿ ಹರಿಯುತ್ತಿವೆ. ರಾಜಕಾಲುವೆ ಪಕ್ಕದಲ್ಲೇ ಹಲವು ಕೂಲಿ ಕಾರ್ಮಿಕರು ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಾರೆ. ಪ್ರತಿ ಬಾರಿ ಮಳೆ ಜೋರಾದಾಗ ಮುಗ್ಧ ಮಕ್ಕಳು ಬಲಿಯಾಗುತ್ತಿರುವುದು ವಿಪರ್ಯಾಸ.








