ಮೈಸೂರು: ಪರಿಶಿಷ್ಠ ಜಾತಿ ವರ್ಗದವರಿಗೆ ಹೇರ್ ಕಟಿಂಗ್ ಮಾಡಿದ್ದಕ್ಕೆ ಕ್ಷೌರಿಕ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಸಾಮಾಜಿಕ ಬಹಿಷ್ಕಾರದಿಂದ ನೊಂದು ಆತ್ಮಹತ್ಯೆಗೆ ನಿರ್ಧರಿಸಿರುವ ನೊಂದ ಮಲ್ಲಿಕಾರ್ಜುನ ಶೆಟ್ಟಿ ಕುಟುಂಬ ನ್ಯಾಯಕ್ಕಾಗಿ ತಹಸೀಲ್ದಾರ್ ಕಚೇರಿ ಹಾಗೂ ಪೊಲೀಸ್ ಠಾಣೆಗೆ ಅಲೆದಾಡುತ್ತಿದೆ.

ಆಧುನಿಕ ಯುಗದಲ್ಲಿಯೂ ಜೀವಂತವಿರುವ ಸಾಮಾಜಿಕ ಬಹಿಷ್ಕಾರ ಆತಂಕ ತಂದಿದೆ. ಹಲ್ಲರೆ ಗ್ರಾಮದ ಮಲ್ಲಿಕಾರ್ಜುನ ಶೆಟ್ಟಿ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರದ ಬರೆ ಎಳೆಯಲಾಗಿದೆ. ಕೆಲ ದಿನಗಳ ಹಿಂದೆ ಪರಿಶಿಷ್ಠ ವರ್ಗದವರಿಗೆ ಹೇರ್ ಕಟಿಂಗ್ ಮಾಡಬಾರದೆಂದು ಗ್ರಾಮದ ಕೆಲ ಮುಖಂಡರು ಆದೇಶ ಹೊರಡಿಸಿದ್ದರು.
ಗ್ರಾಮದ ಮುಖಂಡರಿಗೆ ಹೆದರಿ ಪರಿಶಿಷ್ಟ ಜಾತಿ ವರ್ಗದವರಿಗೆ ಮಲ್ಲಿಕಾರ್ಜುನ ಶೆಟ್ಟಿ ಹೇರ್ ಕಟಿಂಗ್ ಮಾಡುವುದನ್ನ ನಿಲ್ಲಿಸಿದ್ದರು. ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಪರಿಶಿಷ್ಟ ಜಾತಿ ವರ್ಗದವರಿಗೂ ಹೇರ್ ಕಟಿಂಗ್ ಮಾಡಬೇಕೆಂದು ಆದೇಶ ಹೊರಡಿಸಿತು. ಸರ್ಕಾರದ ಆದೇಶವನ್ನ ಮಲ್ಲಿಕಾರ್ಜುನ ಶೆಟ್ಟಿ ಪಾಲಿಸಲು ಮುಂದಾದರು. ಆದರೆ ನಾಯಕ ಸಮುದಾಯದ ಮುಖಂಡರು ಪರಿಶಿಷ್ಟ ವರ್ಗದವರಿಗೆ ಹೇರ್ ಕಟಿಂಗ್ ಶೇವಿಂಗ್ ಮಾಡಬಾರದೆಂದು ನಿಭರ್ಂಧ ಹೇರಿದರು.
ಗ್ರಾಮದ ಚನ್ನನಾಯಕ ಮತ್ತು ಸಹಚರರಿಂದ ಪರಿಶಿಷ್ಟ ಜಾತಿ ವರ್ಗದವರಿಗೆ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡುವಂತಿಲ್ಲ ಎಂದು ಮಲ್ಲಿಕಾರ್ಜುನ ಶೆಟ್ಟಿಗೆ ಆದೇಶ ಬಂತು.

ಪರಿಶಿಷ್ಠ ಜಾತಿ ವರ್ಗಕ್ಕೆ ಕಟಿಂಗ್ ಹಾಗೂ ಶೇವಿಂಗ್ ಮಾಡಲೇಬೇಕೆಂದು ಸರ್ಕಾರದ ಆದೇಶವಿದೆ. ನಾಯಕ ಸಮುದಾಯದ ಮುಖಂಡರ ಆದೇಶ ಧಿಕ್ಕರಿಸಿ ಸರ್ಕಾರದ ಆದೇಶ ಪಾಲಿಸಿದ್ದಕ್ಕೆ ಮಲ್ಲಿಕಾರ್ಜುನ ಶೆಟ್ಟಿ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ ಬಿದ್ದಿದೆ. ಜಾತಿ ತಾರತಮ್ಯವಿಲ್ಲದೆ ಕಸುಬಿನಲ್ಲಿ ತೊಡಗಿದ್ದ ಕುಟುಂಬ ಗೊಂದಲದಲ್ಲಿ ಸಿಲುಕಿದೆ.
ಸಾಮಾಜಿಕ ಬಹಿಷ್ಕಾರದ ಜತೆಗೆ 50 ಸಾವಿರ ದಂಡ ಕಟ್ಟುವಂತೆ ನಾಯಕ ಸಮಾಜದ ಮುಖಂಡರು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಎರಡು ಬಾರಿ ದಂಡ ಕಟ್ಟಿರುವ ಮಲ್ಲಿಕಾರ್ಜುನ ಶೆಟ್ಟಿ ಹೈರಾಣಾಗಿದ್ದಾರೆ.

ಸಾಮಾಜಿಕ ಬಹಿಷ್ಕಾರದಿಂದ ನೊಂದು ತಹಸೀಲ್ದಾರ್ ಕಚೇರಿಗೆ ಅಲೆಯುತ್ತಿರುವ ಮಲ್ಲಿಕಾರ್ಜುನಶೆಟ್ಟಿ ಕುಟುಂಬ ನೊಂದು ಬಳಲಿದೆ.
3 ತಿಂಗಳಿಂದ ಮಾನಸಿಕವಾಗಿ ನೊಂದು ಪರಿಪಾಟಲು ಪಡುತ್ತಿದೆ. ಸಾಮಾಜಿಕ ಬಹಿಷ್ಕಾರದಿಂದ ಆತ್ಮಹತ್ಯೆಯ ದಾರಿ ಹಿಡಿಯಲು ಕುಟುಂಬ ನಿರ್ಧಾರ ಮಾಡಿದೆ. ನಂಜನಗೂಡಿನ ತಹಸೀಲ್ದಾರ್ ಮಹೇಶ್ ಕುಮಾರ್ ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮಹೇಶ್ ಕುಮಾರ್ ಕ್ರಮ ಕೈಗೊಳ್ಳುವಂತೆ ಪೊಲೀಸ್ರಿಗೆ ಪತ್ರ ಬರೆದರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.
ಗ್ರಾಮದಲ್ಲಿ ಇರುವ ಒಂದೇ ನಯನಕ್ಷತ್ರಿಯ ಕುಟುಂಬಕ್ಕೆ ತಾಲ್ಲೂಕು ಆಡಳಿತ ನ್ಯಾಯ ದೊರಕಿಸುವುದೆ ಎಂಬ ಪ್ರಶ್ನೆ ಉದ್ಭವವಾಗಿದೆ. ಮಲ್ಲಿಕಾರ್ಜುನ ಕುಟುಂಬಕ್ಕೆ ಅತ್ತ ಧರಿ ಇತ್ತ ಪುಲಿ ಎಂಬಂತಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








