ದೆಹಲಿ : ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಚೀನಾ ಮತ್ತು ಭಾರತದ ನಡುವೆ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸತ್ಯ ಹೇಳಬೇಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದಿರುವ ಸೋನಿಯಾ ಗಾಂಧಿ, ಭಾರತದ ಪ್ರದೇಶವನ್ನು ಚೀನಾ ಹೇಗೆ ಆಕ್ರಮಿಸಿಕೊಂಡಿದೆ..? ನಮ್ಮ 20 ಜನ ಯೋಧರು ಹೇಗೆ ಮೃತರಾದರು..? ನಮ್ಮ ಸೈನಿಕರ ಅಥವಾ ಸೈನ್ಯಾಧಿಕಾರಿಗಳು ಕಾಣೆಯಾಗಿದ್ದಾರಾ? ಸೈನಿಕರ ಸಂಘರ್ಷದಲ್ಲಿ ಎಷ್ಟು ಜನ ಯೋಧರು ಹಾಗೂ ಅಧಿಕಾರಿಗಳು ಗಾಯಗೊಂಡಿದ್ದಾರೆ.? ಭಾರತದ ಯಾವ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ? ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸಿದ್ದಾರೆ.
ಇದೇ ವೇಳೆ ಹುತಾತ್ಮ ಯೋಧರಿಗೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದು, ”ಇಂತಹ ಬಿಕ್ಕಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಪಕ್ಷವೂ ಸೈನಿಕರು, ಸೇನೆ, ಅವರ ಕುಟುಂಬ ಹಾಗೂ ಸರ್ಕಾರದ ಜೊತೆ ನಿಂತಿದೆ” ಎಂದು ಹೇಳಿದ್ದಾರೆ.