ನವದೆಹಲಿ: ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ಸ್ಪರ್ಧಿಸಲಿದ್ದಾರೆ.
ಐದು ಬಾರಿ ಲೋಕಸಭೆ ಸಂಸದೆಯಾಗಿ ಸೇವೆ ಸಲ್ಲಿಸಿದ ನಂತರ 77 ವರ್ಷದ ಸೋನಿಯಾ ಗಾಂಧಿ ಅವರು ಇದೇ ಮೊದಲ ಬಾರಿಗೆ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
15 ರಾಜ್ಯಗಳ 56 ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ಫೆಬ್ರವರಿ 27 ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ. 1999ರಿಂದ ಸೋನಿಯಾ ಗಾಂಧಿ ಅವರು ಲೋಕಸಭೆಗೆ ಪ್ರವೇಶ ಪಡೆಯುತ್ತಿದ್ದರು. 2024ರ ಲೋಕಸಭಾ ಚುನಾವಣೆಗೆ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿತ್ತು.








