ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ಮಧ್ಯೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕೇವಲ 55 ರನ್ ಗಳಿಗೆ ಆಲೌಟ್ ಆಗಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದ ಪರ ಇಬ್ಬರು ಆಟಗಾರರು ಮಾತ್ರ ಎರಡಂಕಿ ಮೊತ್ತ ದಾಟಿದ್ದು ಬಿಟ್ಟರೆ, ಬೇರೆ ಯಾವ ಆಟಗಾರರೂ ಒಂದಂಕಿ ದಾಟಲಿಲ್ಲ. ತಂಡದ ಪರ ಕೈಲ್ ವೆರ್ರೆನ್ನೆ ಅತ್ಯಧಿಕ 15 ರನ್ ಗಳಿಸಿದರೆ,12 ರನ್ ಕಲೆಹಾಕಿದ ಡೇವಿಡ್ ಬೆಡಿಂಗ್ಹ್ಯಾಮ್ ತಂಡದ ಪರ ಅಧಿಕ ರನ್ ಕಲೆಹಾಕಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಸುನಾಮಿ ಎಬ್ಬಿಸಿದ ಮೊಹಮ್ಮದ್ ಸಿರಾಜ್ (Mohammed Siraj) 6 ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದರು. ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಮುಖೇಶ್ ಕುಮಾರ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಈ ಮೂಲಕ ಭಾರತ ತಂಡ ಕೂಡ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಭಾರತ ತಂಡವು, ಯಾವುದೇ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಔಟ್ ಮಾಡಿದ ದಾಖಲೆ ಬರೆದಿದೆ. 2021ರಲ್ಲಿ ವಾಂಖೆಡೆಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 61 ರನ್‌ಗಳಿಗೆ ಆಲೌಟ್ ಮಾಡಿತ್ತು. ಈಗ ಮತ್ತೊಂದು ದಾಖಲೆಯನ್ನು ಮಾಡಿದೆ. ಆದರೆ, ದಕ್ಷಿಣ ಆಫ್ರಿಕಾ ತಂಡ ಕೆಟ್ಟ ದಾಖಲೆಗೆ ಗುರಿಯಾಗಿದೆ. ಕೇವಲ 23.2 ಓವರ್‌ಗಳಿಗೆ ಮಾತ್ರ ಕ್ರೀಸ್ ನಲ್ಲಿ ಆಟಗಾರರು ಬ್ಯಾಟ್ ಬೀಸುವಂತಾಗಿತ್ತು.
ಮೊಹಮ್ಮದ್ ಸಿರಾಜ್ ತಮ್ಮ ಸ್ವಿಂಗ್ ಮತ್ತು ವೇಗದ ದಾಳಿಯ ಆಧಾರದ ಮೇಲೆ ಇಡೀ ದಕ್ಷಿಣ ಆಫ್ರಿಕಾ ತಂಡವನ್ನು ಆರಂಭದಲ್ಲೇ ಆಘಾತಕ್ಕೀಡುಮಾಡಿದರು. ಈ ಬಲಗೈ ವೇಗಿ ಏಕಾಂಗಿಯಾಗಿ ಅಗ್ರ 6 ಬ್ಯಾಟ್ಸ್‌ಮನ್‌ಗಳಲ್ಲಿ ಐದು ಮಂದಿಯನ್ನು ಬೇಟೆಯಾಡಿದರು. ಅಲ್ಲೆ ಸಿರಾಜ್ ಕೇವಲ 9 ರನ್ ನೀಡಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಕೊನೆಗೆ ಕೈಲ್ ವೆರ್ರೆನ್ನೆ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದರು. ಕೊನೆಗೂ ಸಿರಾಜ್ ಕೇವಲ 15 ರನ್ ನೀಡಿ 6 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.








