ಬೆಂಗಳೂರು: ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಶಾಂತಿ ಸಮ್ಮೇಳನ-2025 ಅದ್ಧೂರಿಯಾಗಿ ನೆರವೇರಿದ್ದು, 7 ರಾಷ್ಟ್ರಗಳ ಕಲಾ-ಸಂಸ್ಕೃತಿಗಳ ಸಂಗಮಕ್ಕೆ ಸಾಕ್ಷಿಯಾಯಿತು. ಜಾಗತಿಕ ಶಾಂತಿ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಚಿಂತನೆ ನಡೆಸಲು ಈ ಸಮ್ಮೇಳನ ಪ್ರಮುಖ ವೇದಿಕೆಯಾಯಿತು.
ನಗರದ ಡಾ. ಬಾಬು ಜಗಜೀವನ್ ರಾಮ್ ಸಭಾಭವನದಲ್ಲಿ ರೋಟರಿ ಅಂತರಾಷ್ಟ್ರೀಯ ಸಂಸ್ಥೆ ರೋಟರಿ ಡಿಸ್ಟ್ರಿಕ್ಟ್ 3192 ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಸದ ಹಾಗೂ ಖ್ಯಾತ ಹೃದಯ ತಜ್ಞ ಡಾ. ಸಿ.ಎನ್. ಮಂಜುನಾಥ್ ಸಮ್ಮೇಳನವನ್ನು ಉದ್ಘಾಟಿಸಿದರು.
ಹಣ ಮತ್ತು ಮೊಬೈಲ್ ಮನುಷ್ಯನ ನೆಮ್ಮದಿಗೆ ದೊಡ್ಡ ತೊಂದರೆ
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಡಾ. ಸಿ.ಎನ್. ಮಂಜುನಾಥ್, ಮನುಷ್ಯ ಕಂಡುಹಿಡಿದ ಎರಡು ಅನಗತ್ಯ ವಸ್ತುಗಳೆಂದರೆ ಹಣ ಮತ್ತು ಮೊಬೈಲ್. ಇವೆ ಎರಡು ನಮ್ಮ ನೆಮ್ಮದಿಯನ್ನು ಕಿತ್ತುಕೊಂಡಿವೆ, ನಾವು ಶಾಂತಿಯನ್ನು ಬಿಟ್ಟು ನಡೆದಾಡುವ ಮಷಿನ್‌ಗಳಾಗಿ ಮಾರ್ಪಟ್ಟಿದ್ದೇವೆ. ಆದರೆ ಈ ಶಾಂತಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿಲ್ಲ ಎಂದು ಅವರು ಹೇಳಿದರು.
ರೋಟರಿ ಸೇವೆಯ ಮಹತ್ವ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಡಿಸ್ಟ್ರಿಕ್ಟ್ 3192 ಜಿಲ್ಲಾ ಗವರ್ನರ್ ಮಹದೇವ್ ಪ್ರಸಾದ್ ಎನ್.ಎಸ್., ಈಗಿನ ಯುಗದಲ್ಲಿ ಮಾನವೀಯ ಮೌಲ್ಯಗಳನ್ನು ಪುನಃ ನೆನಪಿಸಬೇಕಾದ ಅಗತ್ಯ ಇದೆ. ಗಡಿಯಾಚೆಗೂ ಮಾನವೀಯ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಜಾಗತಿಕ ಶಾಂತಿಯನ್ನು ಕಾಪಾಡಲು ರಾಷ್ಟ್ರಗಳು ಒಗ್ಗೂಡಬೇಕು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಅಂತಾರಾಷ್ಟ್ರೀಯ ಪ್ರತಿನಿಧಿಗಳ ಸಂದೇಶ
ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆಯ ಅಮೇರಿಕಾದ ಬ್ರಿಯಾನ್ ರಶ್, ದೇಶಗಳ ನಡುವೆ ಸೌಹಾರ್ದ ವಾತಾವರಣವನ್ನು ಹೆಚ್ಚಿಸಬೇಕು. ಶಾಂತಿಯ ಪರ ಹೋರಾಟಗಾರರೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸಬೇಕು ಎಂದು ಹೇಳಿದರು.
ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಆಸ್ತಿಯಿದ್ದವನಲ್ಲ, ಶಾಂತಿ ಮತ್ತು ನೆಮ್ಮದಿಯುಳ್ಳವನು ನಿಜವಾದ ಶ್ರೀಮಂತ ಎಂದು ಒತ್ತಿಹೇಳಿದರು.
ಸಾಂಸ್ಕೃತಿಕ ವೈಭವ – 170 ಕಲಾವಿದರ ಭವ್ಯ ನೃತ್ಯ ಪ್ರದರ್ಶನ
ಸಮ್ಮೇಳನದ ಪ್ರಮುಖ ಆಕರ್ಷಣೆ ಜನಾರ್ಧನ್ ರಾಜ್ ಅರಸ್ ಅವರ ಪರಿಕಲ್ಪನೆಯಲ್ಲಿ ನಡೆದ ನವೋತ್ಥಾನ ಡ್ಯಾನ್ಸ್ ಡ್ರಾಮ. 5 ರಾಷ್ಟ್ರಗಳ 170 ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭರತನಾಟ್ಯ, ಕುಚುಪುಡಿ, ಒಡಿಸ್ಸಿ, ಕಥಕ್, ಮತ್ತು ಸಮರಕಲೆಗಳಾದ ಕಳರಿಪಯಟ್ಟು, ತಾಂಗ್ ಥಾ, ಚಾವ್ ಸೇರಿದಂತೆ ವಿವಿಧ ನೃತ್ಯಶೈಲಿಗಳು ಪ್ರೇಕ್ಷಕರನ್ನು ಆಕರ್ಷಿಸಿದವು.
ಡಾ. ಸಿ.ಎನ್. ಮಂಜುನಾಥ್ ಅವರಿಗೆ ಗೌರವ ಸನ್ಮಾನ
ಈ ಸಂದರ್ಭದಲ್ಲಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಡಿಸ್ಟ್ರಿಕ್ಟ್ 3192 ಜಿಲ್ಲಾ ಗವರ್ನರ್ ಮಹದೇವ್ ಪ್ರಸಾದ್, ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಅಮೇರಿಕಾದ ಬ್ರಿಯಾನ್ ರಶ್, ಶ್ರೀನಿವಾಸ ಮೂರ್ತಿ ಈ ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನದ ಮಹತ್ವ
ಶಾಂತಿ, ಸೌಹಾರ್ದತೆ ಮತ್ತು ಜಾಗತಿಕ ಸಹಬಾಳ್ವೆಗಾಗಿ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಶಾಂತಿ ಸಮ್ಮೇಳನ-2025 ಪ್ರತಿಷ್ಠಿತ ವೇದಿಕೆಯಾಗಿದ್ದು, ಜನಸಾಮಾನ್ಯರಿಂದ ಗಣ್ಯರ ವರೆಗೆ ಮಾನವೀಯತೆ ಮತ್ತು ಶಾಂತಿಯ ಮಹತ್ವ ಸಾರಿದ ಕಾರ್ಯಕ್ರಮವಾಯಿತು.








