ಅಮರಾವತಿ: ದಕ್ಷಿಣ ಭಾರತ ಭಾಗದಲ್ಲಿನ ಜನರು ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು (Chandrababu Naidu) ಕರೆ ನೀಡಿದ್ದಾರೆ.
ದಕ್ಷಿಣ ಭಾರತದಲ್ಲಿನ ರಾಜ್ಯಗಳಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಕಳವಳ ವ್ಯಕ್ತಪಡಿಸಿ ಈ ರೀತಿ ಮಾತನಾಡಿದ್ದಾರೆ. ಹೆಚ್ಚಿನ ಮಕ್ಕಳಿರುವ ಕುಟುಂಬಗಳನ್ನು ಪ್ರೋತ್ಸಾಹಿಸಲು ಹೊಸ ಕಾನೂನನ್ನು ಜಾರಿಗೊಳಿಸಲಾಗುವುದು. ಜನಸಂಖ್ಯೆ ನಿರ್ವಹಣೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
2 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ರಾಜ್ಯವು ಈ ಹಿಂದೆ ಕಾನೂನನ್ನು ಅಂಗೀಕರಿಸಿದೆ. ನಾವು ಆ ಕಾನೂನನ್ನು ರದ್ದುಗೊಳಿಸಿದ್ದೇವೆ. ಈಗ ಅದನ್ನು ಹಿಂತೆಗೆದುಕೊಳ್ಳಲು ನಾವು ಪರಿಗಣಿಸುತ್ತಿದ್ದೇವೆ. ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಸರ್ಕಾರವು ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ ಎಂದಿದ್ದಾರೆ.
2047 ರ ವರೆಗೆ ಜನಸಂಖ್ಯಾ ಪ್ರಯೋಜನವನ್ನು ಹೊಂದಿದ್ದರೂ, ಆಂಧ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಏರಿಕೆಯಾಗುತ್ತಿದೆ. ಜಪಾನ್, ಚೀನಾ ಮತ್ತು ಯುರೋಪಿಯನ್ ರಾಷ್ಟ್ರಗಳಂತಹ ಅನೇಕ ದೇಶಗಳು ಈ ಸಮಸ್ಯೆಯೊಂದಿಗೆ ಹೋರಾಡುತ್ತಿವೆ. ಹೀಗಾಗಿ ನಾವು ಈ ಸಮಸ್ಯೆ ತಡೆಗಟ್ಟಲು ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದಿದ್ದಾರೆ.








