ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಜಗಳ ನಡೆದು, ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ನಡೆದಿದೆ.
ಇಲ್ಲಿಯ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೊಯ್ಸಳ ನಗರ ನಿವಾಸಿ ಮನೋಜ್(22) ಕೊಲೆಯಾಗಿರುವ ಯುವಕ. ಶನಿವಾರ ಬೆಳಗಿನ ಜಾವ ಹೊಯ್ಸಳ ನಗರದ ಮೂರನೇ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ಮನೋಜ್ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿ ಗೋ-ಫಿಜ್ಜಾದಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ಬೆಳಿಗ್ಗೆ ರಸ್ತೆಯಲ್ಲಿ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಎದುರಿನಿಂದ ಬಂದ ಯುವಕ ಮನೋಜ್ ನನ್ನು ಗುರಾಯಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ತೆರಳಿದ್ದು, ಆ ಯುವಕ ಬಲವಾದ ಆಯುಧದಿಂದ ಮನೋಜ್ ನ ತಲೆಗೆ ಹೊಡೆದು ಪರಾರಿಯಾಗಿದ್ದಾನೆ.
ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ನನ್ನು ಸ್ನೇಹಿತರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಸಾವನ್ನಪ್ಪಿದ್ದಾನೆ. ಈ ಕುರಿತು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








