ಎಸ್.ಪಿ. ಬಾಲಸುಬ್ರಮಣ್ಯಂ ಮೂಲತಃ ತಮಿಳುನಾಡಿನವರಾದರೂ, ಅವರನ್ನು ಕನ್ನಡಿಗರಾಗಿ ಕಂಡವರು ನಾವು. ನನಗೆ ಈ ಭಾಷೆ, ಇಲ್ಲಿನ ಜನ ತೋರಿಸುವ ಪ್ರೀತಿ ನೋಡಿದಾಗ ನಾನು ಭಾವನಾ ಲೋಕಕ್ಕೆ ಹೋಗುತ್ತೇನೆ ಎಂದು ಅವರು ಕೂಡ ಕನ್ನಡದ ಬಗೆಗಿನ ಪ್ರೀತಿಯನ್ನು ಬಹಳ ಸಲ ಬಹಿರಂಗವಾಗಿ ಹೇಳಿಕೊಂಡಿದ್ದರು. ಎಸ್.ಪಿಬಿ ಉದ್ಯಮ ಕಂಡ ಅತ್ಯಂತ ಸಂಭಾವಿತ, ಸರಳ ಸಜ್ಜನಿಕೆಯ ವ್ಯಕ್ತಿ.
ಬಾಲಸುಬ್ರಹ್ಮಣ್ಯಂ ಗಾಯಕ ಎಂಬ ಕಾರಣಕ್ಕೆ ಪ್ರಖ್ಯಾತರಾಗಿರುವುದು ನಿಜವಾದರೂ ಅವರ ಸರಳ ಸ್ವಭಾವ ಕೂಡ ಅವರನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎಸ್.ಪಿಬಿ ಹಾಡಿನ ಜೊತೆಗೆ ಭಾವಗಳನ್ನು ಸೆರೆಹಿಡಿಯಬಲ್ಲ ಗಾಯಕರಾಗಿ ಗುರುತಿಸಿ ಕೊಂಡವರು. ಆಯಾ ಭಾಷೆಯ ಕಲಾವಿದರಿಗೆ ತಕ್ಕಂತೆ ತಮ್ಮ ಕಂಠವನ್ನು ಬದಲಾಯಿಸಿ ಧ್ವನಿಯಾದವರು.
ಬದುಕಿನ ಪೂರ್ತಿ ಅನೇಕ ಗುರುಗಳು; ಯಶ ಸಿಕ್ಕ ನಂತರ ಶಾಸ್ತ್ರೀಯ ಸಂಗೀತ ಕಲಿಕೆ – ಇದು ಎಸ್ ಪಿ ಬಿ ಯಶೋಗಾಥೆ
ಬಾಲಸುಬ್ರಹ್ಮಣ್ಯಂ ಹಾವಿನ ದ್ವೇಷ ಹನ್ನೆರಡು ವರುಷ ಎಂದು ಹಾಡಿದಾಗ ಅಲ್ಲಿ ಕಾಣಿಸಿಕೊಂಡ ವಿಷ್ಣುವರ್ಧನ್ ಧ್ವನಿ, ಆಪ್ತರಕ್ಷಕದ ಗರನೆ ಗರ ಗರನೇ ತನಕವೂ ವಿಷ್ಣುವೇ ಹಾಡನ್ನು ಹಾಡುತ್ತಿರುವಂತೆಯೇ ಕೇಳಿಸಿತು. ಗೀತಾಂಜಲಿ.. ನಲಿವಾ ಗುಲಾಬಿ ಹೂವೇ ಹಾಡಿನಲ್ಲಿ ಶಂಕರ್ ನಾಗ್ ಧ್ವನಿಯಲ್ಲಿ ಹಾಡು ಕೇಳಿಸಿದರೆ, ಮಂಡ್ಯದ ಗಂಡು ಹಾಡಿನಲ್ಲಿ ಅಂಬರೀಶ್ ಹಾಡಿನ ಫೀಲ್.. ಸ್ನೇಹದ ಕಡಲಲ್ಲಿ ಪಯಣಿಗ ನಾನಮ್ಮ ಎಂದಾಗ ಅಲ್ಲಿ ಶ್ರೀನಾಥ್ ಕಾಣಿಸಿದರೆ, ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂದು ಹಾಡಿದಾಗ ಅನಂತ್ ನಾಗ್ ರ ಧ್ವನಿ ಕೇಳಿಸಿತು.
ನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ಕನ್ನಡ ಬೆಳ್ಳಿ ತೆರೆ ಪ್ರವೇಶಿಸಿದ ಎಸ್ ಪಿ ಬಿ ಅತ್ಯಲ್ಪ ಸಮಯದಲ್ಲಿಯೇ ಕನ್ನಡ ಚಿತ್ರರಂಗದ ಮೇರು ಸ್ಥಾನಕ್ಕೆ ಏರಿದವರು. ವಿನಯವಾದ ನಗುಮುಖದಿಂದ , ತಪ್ಪಿಲ್ಲದೆ ಕನ್ನಡ ಮಾತನಾಡುತ್ತಾ ಕನ್ನಡಿಗರ ಅಚ್ಚುಮೆಚ್ಚಿನ ಗಾಯಕ ಇಂದು ಹಾಡು ನಿಲ್ಲಿಸಿ ಸಪ್ತ ಸ್ವರಗಳಲ್ಲಿ ಲೀನವಾಗಿದ್ದಾರೆ.