ಪುರಿ ಬೀಚಿನ ಮರಳಿನಲ್ಲಿ ಎಸ್‌ಪಿಬಿ ಅವರ ಮರಳು ಶಿಲ್ಪ
ಪುರಿ, ಸೆಪ್ಟೆಂಬರ್27: ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಶುಕ್ರವಾರ ನಿಧನರಾದ ಗಾಯಕ ಎಸ್‌ಪಿಬಿ ಅವರಿಗೆ ಮರಳು ಶಿಲ್ಪವನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ. ಒಡಿಶಾದ ಪುರಿ ಕಡಲ ತೀರದಲ್ಲಿ ಮರಳು ಶಿಲ್ಪವನ್ನು ರಚಿಸಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರು ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕ ಮತ್ತು ಡಬ್ಬಿಂಗ್ ಕಲಾವಿದರಾಗಿದ್ದರು. ಅವರು ತೆಲುಗು, ತಮಿಳು, ಕನ್ನಡ, ಹಿಂದಿ, ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಭಾಷೆಯ ಅಡೆತಡೆಗಳನ್ನು ಮೀರಿ ಯಶಸ್ಸು ಸಾಧಿಸಿದ್ದರು.
ಆಕಾಶ ದೀಪವು ನೀವು.. ನೀವಿಲ್ಲದೆ ಸಂಗೀತ ಲೋಕವು ನೀರಸ ಗೋಳು..
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಸ್‌ಪಿಬಿ ಅವರು ಪತ್ನಿ ಸಾವಿತ್ರಿ ಬಾಲಸುಬ್ರಹ್ಮಣ್ಯಂ ಮತ್ತು ಅವರ ಮಕ್ಕಳಾದ ಎಸ್.ಪಿ.ಚರಣ್, ಪಲ್ಲವಿ ಮತ್ತು ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಆಗಸ್ಟ್ 5 ರಂದು, ಎಸ್‌ಪಿಬಿ ಅವರು ಕೊರೋನಾ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರದ ದಿನಗಳಲ್ಲಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು ಮತ್ತು ಶ್ವಾಸಕೋಶಕ್ಕೂ ಹಾನಿಯುಂಟಾಗಿತ್ತು. ಇವೆಲ್ಲದರ ನಡುವೆ ಅವರು ಗುಣಮುಖರಾಗುತ್ತಿರುವ ಸುದ್ದಿ ಹೊರಬಿದ್ದಿತ್ತು ಮತ್ತು ಆರೋಗ್ಯ ಮತ್ತಷ್ಟು ಹದಗೆಟ್ಟಿತು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಮತ್ತು ಅಭಿಮಾನಿಗಳು ಸಂಗೀತ ದಿಗ್ಗಜ ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2001 ರಲ್ಲಿ ಪದ್ಮಶ್ರೀ ಮತ್ತು 2011 ರಲ್ಲಿ ಪದ್ಮಭೂಷಣ್ ನೀಡಿ ಅವರನ್ನು ಸನ್ಮಾನಿಸಲಾಯಿತು.








