ಮಾರುಕಟ್ಟೆಗೆ ಲಗ್ಗೆಯಿಟ್ಟ ವಿಶೇಷವಾದ ಹರ್ಬಲ್ ಸೀರೆಗಳು
ಭೋಪಾಲ್, ಅಗಸ್ಟ್ 17: ಕೊರೋನಾ ಕಾಲಘಟ್ಟದಲ್ಲಿ ಯಾವುದನ್ನು ನಂಬುವುದು, ಯಾವುದನ್ನು ನಿರಾಕರಿಸುವುದು ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪ್ರಸ್ತುತ ಮಧ್ಯಪ್ರದೇಶದ ಎರಡು ನಗರಗಳಾದ ಭೋಪಾಲ್ ಮತ್ತು ಇಂದೋರ್ ನಲ್ಲಿ ರೋಗ ನಿರೋಧಕ ವರ್ಧಕವಾಗಿ ಕಾರ್ಯನಿರ್ವಹಿಸುವ ವಿಶೇಷವಾದ ಹರ್ಬಲ್ ಸೀರೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ಸೀರೆಗಳ ವಿಶೇಷತೆ ಏನು?
ಮಧ್ಯಪ್ರದೇಶದ ಕೈಮಗ್ಗ ಮತ್ತು ಕರಕುಶಲ ನಿಗಮವು ಪ್ರಾಚೀನ ವಿಧಾನದಲ್ಲಿ ಸೀರೆ ತಯಾರಿಕೆಯನ್ನು ಪ್ರಾರಂಭಿಸಿದೆ. ಋಷಿ ಮುನಿಗಳ ಕಾಲದಲ್ಲಿ ಬಟ್ಟೆಗಳ ಗುಣಮಟ್ಟವನ್ನು ಹೆಚ್ಚಿಸಲು ಈ ವಿಧಾನವನ್ನು ಬಳಸಲಾಗುತ್ತಿತ್ತು ಎಂದು ಅದು ಹೇಳಿದೆ. ಈ ಸೀರೆಗಳಿಗೆ “ಆಯುರ್ವಸ್ತ್ರ’ ಎಂದು ಹೆಸರಿಡಲಾಗಿದೆ.

ಗಿಡಮೂಲಿಕೆಗಳನ್ನು ಬಳಸಿ ಸೀರೆಗಳನ್ನು ತಯಾರಿಸಿರುವ ಹಿನ್ನೆಲೆಯಲ್ಲಿ ಈ ಸೀರೆಗಳನ್ನು ಧರಿಸುವುದರಿಂದ ಮಹಿಳೆಯರ ದೇಹದ ಮೇಲೆ ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು ಬೆಳೆಯಲು ಅವಕಾಶವಿರುವುದಿಲ್ಲ ಎಂದು ಕೈಮಗ್ಗ ಮತ್ತು ಕರಕುಶಲ ನಿಗಮವು ಹೇಳಿದೆ.
ಸೀರೆಗಳನ್ನು ಯಾವ ವಿಧಾನದಲ್ಲಿ ತಯಾರಿಸಲಾಗುತ್ತದೆ?
ಸೀರೆ ತಯಾರಿಸಲು, ಲವಂಗ, ದೊಡ್ಡ ಏಲಕ್ಕಿ, ಕರಿಮೆಣಸು, ಕೆಲವು ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಇತರ ಮಸಾಲೆಗಳ ಮಿಶ್ರಣವನ್ನು ಮೊದಲು ತಯಾರಿಸಲಾಗುತ್ತದೆ. ತಯಾರಾದ ಪುಡಿಯನ್ನು ಹತ್ತಿ ಬಟ್ಟೆಯ ಕಟ್ಟುಗಳಲ್ಲಿ ಕಟ್ಟಿ ಸುಮಾರು ಎರಡು ದಿನಗಳ ಕಾಲ ನೀರಿನಲ್ಲಿ ನೆನೆಸಿಡಲಾಗುತ್ತದೆ.

ಇದರ ನಂತರ, ಈ ನೀರನ್ನು ದೊಡ್ಡ ಕುಲುಮೆಯಲ್ಲಿ ಕುದಿಸಿದಾಗ ಅವಿ ಬರಲು ಪ್ರಾರಂಭವಾಗುತ್ತದೆ. ನಂತರ, ಬಟ್ಟೆಯನ್ನು ಅದರ ಉಗಿಯಲ್ಲಿ ಹಲವು ಗಂಟೆಗಳ ಕಾಲ ಬೇಯಿಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಮೇಲೆ ಆ ಬಟ್ಟೆಗಳಿಂದ ಸೀರೆಗಳನ್ನು ಅಥವಾ ಇನ್ನಿತರ ಉಡುಪುಗಳನ್ನು ತಯಾರಿಸಲಾಗುತ್ತದೆ. ಉಗಿ ರೂಪದಲ್ಲಿ ಔಷಧಿಗಳ ಸಾರಗಳು ಬಟ್ಟೆಯ ನಾರುಗಳನ್ನು ತಲುಪಿರುತ್ತದೆ.
ಪ್ರಯೋಜನಗಳು ಯಾವುವು?
ಈ ವಿಧಾನದಿಂದ ತಯಾರಿಸಿದ ಸೀರೆಗಳು ಚರ್ಮದ ಪ್ರತಿರಕ್ಷೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಕಾರಣ ಈ ಬಟ್ಟೆಯಿಂದ ಮಾಡಿದ ಸೀರೆಗಳು ಆಂಟಿಫಂಗಲ್, ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.
ಈ ಸೀರೆಗಳು ರೋಗಾಣುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಕೊರೋನಾ ಅವಧಿಯಲ್ಲಿ ಪ್ರಯಾಣದ ಕೈಗೊಂಡಾಗ ಅಥವಾ ಯಾರನ್ನಾದರೂ ಭೇಟಿಯಾದಾಗ ಈ ಸೀರೆಗಳನ್ನು ಧರಿಸುವುದರಿಂದ, ಕೊರೋನಾ ವೈರಸ್ ನಿಂದ ನಿಮ್ಮನ್ನು ಸೀರೆ ಕಾಪಾಡುತ್ತದೆ.

ಈ ಸೀರೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ನೆರವಾಗುವುದರಿಂದ ಹೃದಯವು ಆರೋಗ್ಯವಾಗಿರುತ್ತದೆ.
ಪರಿಣಾಮ ಎಷ್ಟು ಕಾಲ ಉಳಿಯುತ್ತದೆ?
ಈ ಸೀರೆಗಳು ನಿಮಗೆ ಜೀವಿತಾವಧಿಯವರೆಗೆ ರಕ್ಷಣೆಯನ್ನು ನೀಡುವುದಿಲ್ಲ. ಬದಲಾಗಿ, ಆಂಟಿಪಾಥೋಜೆನ್ ಮೂಲಿಕೆ ಸಾರಗಳ ಪರಿಣಾಮ ಈ ಸೀರೆಗಳಲ್ಲಿ 4 ರಿಂದ 5 ದಿನಗಳವರೆಗೆ ಇರುತ್ತದೆ.
ನೀವು ತೊಳೆಯಲು ಗಿಡಮೂಲಿಕೆ ಡಿಟರ್ಜೆಂಟ್‌ಗಳನ್ನು ಬಳಸಿದರೆ ಮೂರ್ನಾಲ್ಕು ಸಲ ತೊಳೆದರೂ ಇದರಲ್ಲಿರುವ ರೋಗನಿರೋಧಕ ಶಕ್ತಿಯ ಗುಣಗಳು ಹಾಗೆಯೇ ಉಳಿದುಕೊಳ್ಳುತ್ತದೆ ಎಂದು ನಿಗಮ ಹೇಳಿದೆ.

ಈ ಸೀರೆಯ ಬೆಲೆ 3 ರಿಂದ 5 ಸಾವಿರ ರೂಪಾಯಿಗಳ ನಡುವೆ ಇದ್ದು, ಇದೀಗ ಈ ಸೀರೆಗಳು ಭೋಪಾಲ್ ಮತ್ತು ಇಂದೋರ್‌ನ ಅಂಗಡಿಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ಇದು ಶೀಘ್ರದಲ್ಲೇ ದೇಶದ ಇತರ ರಾಜ್ಯಗಳಲ್ಲಿರುವ ಅಂಗಡಿಗಳಲ್ಲಿ ಲಭ್ಯವಾಗಲಿದೆ ಎಂದು ನಿಗಮ ತಿಳಿಸಿದೆ.








