ಕೋವಿಡ್ ಹೋರಾಟಕ್ಕೆ ಆನೆಬಲ : ಭಾರತಕ್ಕೆ ಬಂತು ಸ್ಪುಟ್ನಿಕ್-ವಿ
ಹೈದರಾಬಾದ್ : ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದ್ರೆ ದೇಶದಲ್ಲಿ ಲಸಿಕಾ ಅಭಿಯಾನ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.
ಸಾಕಷ್ಟು ಲಸಿಕಾ ಕೇಂದ್ರಗಳಲ್ಲಿ ನೋ ಸ್ಟಾಕ್ ಅನ್ನೋ ಬೋರ್ಡ್‍ಗಳು ಕಾಣುತ್ತಿವೆ. ಇದು ಒಂದು ಕಡೆಯಾದ್ರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಮಸ್ಯೆ ಉಂಟಾಗಿ ಜನರು ಬೀದಿಯಲ್ಲೇ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಕೊರೊನಾ ವಿರುದ್ಧ ಹೋರಾಟ ಮತ್ತಷ್ಟು ಗಟ್ಟಿಗೊಳಿಸಲು ಇದೀಗ ಭಾರತಕ್ಕೆ ರಷ್ಯಾದಿಂದ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆಯ ಮೊದಲ ಬ್ಯಾಚ್ ಆಗಮನವಾಗಿದೆ.
ರಷ್ಯಾದಿಂದ 2 ಲಕ್ಷ ಡೋಸ್ ಗಳನ್ನು ಹೊತ್ತ ವಿಮಾನ ಇಂದು ಬೆಳಿಗ್ಗೆ ಹೈದರಾಬಾದ್ ನ ಏರ್ ಪೋರ್ಟ್ ಗೆ ಆಗಮಿಸಿದೆ.
ಇದನ್ನ ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿ ಕಸೂಲಿಗೆ ಹಸ್ತಾಂತರ ಮಾಡಲಾಗುವುದು. ತದನಂತರ ಅನುಮೊದನೆ ಪಡೆದುಕೊಂಡು ಜನರಿಗೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ.
ಮೇ ಎರಡನೇ ಹಾಗೂ ಕೊನೆಯ ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳು ಆಗಮನವಾಗುವ ಸಾಧ್ಯತೆ ಇದೆ. ಸ್ಪುಟ್ನಿಕ್ ವಿ ಬಳಕೆಗೆ ಏಪ್ರಿಲ್ 12ರಂದೇ ಡಿಸಿಜಿಐ ಗ್ರೀನ್ ಸಿಗ್ನಲ್ ನೀಡಿದೆ.
ಸದ್ಯ ದೇಶದಲ್ಲಿ ದೇಶಿಯ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳು ಹೆಮ್ಮಾರಿಯ ವಿರುದ್ಧ ಹೋರಾಡುತ್ತಿವೆ. ಇದೀಗ ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ಆಗಮಿಸಿದ್ದು, ಕೊರೊನಾ ವಿರುದ್ಧ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ.










