ಕೇರಳ ರಣಜಿ ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಕೊಚ್ಚಿ ಎಕ್ಸ್ ಪ್ರೆಸ್ ಶ್ರೀಶಾಂತ್
ಟೀಮ್ ಇಂಡಿಯಾದ ವೇಗಿ ಶ್ರೀಶಾಂತ್‍ಗೆ ಇದು ಶುಭ ಸುದ್ದಿ. ಏಳು ವರ್ಷಗಳ ನಂತರ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವ ಅವಕಾಶವನ್ನು ಕೇರಳ ಕ್ರಿಕೆಟ್ ಮಂಡಳಿ ನೀಡಿದೆ. 2013ರ ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿ ಏಳು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಶ್ರೀಶಾಂತ್ ಮತ್ತೆ ದೇಶಿ ಕ್ರಿಕೆಟ್‍ಗೆ ಎಂಟ್ರಿಯಾಗಲಿದ್ದಾರೆ.
ಏಳು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದ ಶ್ರೀಶಾಂತ್ ಅವರು ಚಡಪಡಿಸುತ್ತಿದ್ದರು. ಇದೀಗ ಅವರ ಶಿಕ್ಷೆಯ ಅವಧಿ 2020ರ ಸೆಪ್ಟಂಬರ್ ನಲ್ಲಿ ಮುಗಿಯಲಿದೆ. ಹೀಗಾಗಿ ಕೇರಳ ರಣಜಿ ತಂಡಕ್ಕೆ ಮತ್ತೆ ವಾಪಸ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ ಅದಕ್ಕಿಂತ ಮೊದಲು ಶ್ರೀಶಾಂತ್ ಫಿಟ್‍ನೆಸ್
ಸಾಬೀತುಪಡಿಸಬೇಕಾಗಿದೆ. 2013ರ ಮೇ ತಿಂಗಳಿನಲ್ಲಿ ಶ್ರೀಶಾಂತ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಸ್ಪಾಟ್ ಫಿಕಿಂಗ್ಸ್ ಆರೋಪದಡಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರ ಆಡುತ್ತಿದ್ದ ಶ್ರೀಶಾಂತ್ ಸೇರಿ ಅಜಿತ್ ಚಾಂಡಿಲ್ಯ ಮತ್ತು ಅಂಕಿತ್ ಚಾವನ್‍ರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಅಲ್ಲದೆ ಬಿಸಿಸಿಐ ಈ ಮೂವರು ಆಟಗಾರರಿಗೆ ಅಜೀವ ನಿಷೇಧದ ಶಿಕ್ಷೆಯನ್ನು ವಿಧಿಸಿತ್ತು. ಆದ್ರೆ ಶ್ರೀಶಾಂತ್ ತನ್ನ ಮೇಲಿನ ಆರೋಪ ಸುಳ್ಳು ಅಂತ ಕಾನೂನು ಹೋರಾಟ ನಡೆಸಿದ್ದರು. 2015ರಲ್ಲಿ ದೆಹಲಿ ವಿಶೇಷ ಕೋರ್ಟ್ ಶ್ರೀಶಾಂತ್ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಆದ್ರೆ ಬಿಸಿಸಿಐನ ಅಜೀವ ನಿಷೇಧದ ಶಿಕ್ಷೆ ಹಾಗೇ ಉಳಿದಿತ್ತು. ಬಳಿಕ 2018ರಲ್ಲಿ ಕೇರಳ ಹೈಕೋರ್ಟ್ ಬಿಸಿಸಿಐ ನಿಷೇಧವನ್ನು ಪ್ರಶ್ನೆ ಮಾಡಿತ್ತು. ಹಾಗೇ 2019ರಲ್ಲಿ ಸುಪ್ರೀಮ್ ಕೋರ್ಟ್ ಬಿಸಿಸಿಐಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಆದೇಶ ನೀಡಿತ್ತು. ಹೀಗಾಗಿ ಶ್ರೀಶಾಂತ್‍ಗೆ ಏಳು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿತ್ತು.
ಕೇರಳ ಕ್ರಿಕೆಟ್ ಸಂಸ್ಥೆಗೆ ನಾನು ಅಭಾರಿಯಾಗಿದ್ದೇನೆ. ಕೇರಳ ಕ್ರಿಕೆಟ್ ಸಂಸ್ಥೆಯು ನನಗೆ ಮತ್ತೊಂದು ಅವಕಾಶ ನೀಡಿದೆ. ನಾನು ನನ್ನ ದೈಹಿಕ ಕ್ಷಮತೆಯನ್ನು ಸಾಬೀತುಪಡಿಸುತ್ತೇನೆ. ಅಲ್ಲದೆ ಮತ್ತೆ ಮೈದಾನಕ್ಕಿಳಿಯುತ್ತೇನೆ. ಎಲ್ಲಾ ಆರೋಪ, ವಿವಾದಗಳಿಗೆ ಈಗ ತೆರೆ ಎಳೆಯುವ ಸಮಯ ಅಂತ ಶ್ರೀಶಾಂತ್ ಹೇಳಿದ್ದಾರೆ.
ಕೇರಳ ಕ್ರಿಕೆಟ್ ಸಂಸ್ಥೆಯು ಶ್ರೀಶಾಂತ್ ಆಗಮನವನ್ನು ಸ್ವಾಗತಿಸುತ್ತದೆ. ಆದ್ರೆ ಅವರು ಫಿಟ್‍ನೆಸ್ ಪ್ರೂವ್ ಮಾಡಬೇಕಾಗುತ್ತದೆ. ಶ್ರೀಶಾಂತ್ ಒಬ್ಬ ಅನುಭವಿ
ಬೌಲರ್. ಹಾಗಾಗಿ ಕೇರಳ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬಲಿದ್ದಾರೆ ಎಂದು ಕೇರಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸಾಜನ್ ಕೆ ವರ್ಗೀಸ್ ಹೇಳಿದ್ದಾರೆ. ಇತ್ತೀಚೆಗೆ ಕೇರಳ ರಣಜಿ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ಬೌಲರ್ ಟಿನೂ ಯೋಹಾನನ್ ಅವರು ಹೆಡ್ ಕೋಚ್ ಆಗಿ ನೇಮಕಗೊಳಿಸಲಾಗಿದೆ.
ಕೇರಳದ ಕೊಚ್ಚಿ ಮೂಲದ ಶ್ರೀಶಾಂತ್, 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್‍ಗಳನ್ನು ಉರುಳಿಸಿದ್ದಾರೆ. ಹಾಗೇ 75 ಏಕದಿನ ಪಂದ್ಯಗಳಲ್ಲಿ ವಿಕೆಟ್ ಕಬಳಿಸಿದ್ದಾರೆ. 2007ರ ಟಿ-ಟ್ವೆಂಟಿ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲೂ ಶ್ರೀಶಾಂತ್ ಇದ್ರು. ಇನ್ನು ಶ್ರೀಶಾಂತ್ ಆಟದಷ್ಟೇ ವಿವಾದಕ್ಕೂ ಕಾರಣರಾಗಿದ್ದರು. ಮೈದಾನದಲ್ಲಿ ಅವರ ಆಕ್ರಮಣಕಾರಿ ಪ್ರವೃತ್ತಿಯನ್ನು
ಹಿಡಿತದಲ್ಲಿಟ್ಟುಕೊಳ್ಳುವುದೇ ನಾಯಕನಿಗೆ ದೊಡ್ಡ ತಲೆನೋವಾಗಿತ್ತು. ಹಾಗೇ ಹರ್ಭಜನ್ ಸಿಂಗ್ ಜೊತೆ ಮಾತು ಬೆಳೆಸಿಕೊಂಡು ಕಪಾಳ ಮೋಕ್ಷ ಕೂಡ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾ ಆಟಗಾರರ ವಿರುದ್ಧವಂತೂ ಜಗಳಕ್ಕೆ ಮುಗಿ ಬೀಳ್ತಾ ಇದ್ರು. ಈ ನಡುವೆ ರಾಜಕೀಯವಾಗಿಯೂ ಶ್ರೀಶಾಂತ್ ಗುರುತಿಸಿಕೊಂಡಿದ್ದರು. ತಿರುವನಂತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶ್ರೀಶಾಂತ್, ಕಾಂಗ್ರೆಸ್‍ನ ವಿ.ಎಸ್. ಶಶಿ ತರೂರು ವಿರುದ್ಧ ಸೋಲು ಅನುಭವಿಸಿದ್ದರು.








