ಧಾರವಾಡ : ಜೈನ ಧರ್ಮ ಸಿದ್ಧಾಂತದ ಆಚರಣೆಗಳಲ್ಲಿ ಒಂದಾದ ದಶಲಕ್ಷಣ ಪರ್ವದ 10 ದಿನಗಳ ಅನುಷ್ಠಾನ ಮತ್ತು ಧರ್ಮ ಚಿಂತನೆಯ ಕೊನೆಯ ಘಟ್ಟವಾಗಿ ಆಚರಿಸುವ ಕ್ಷಮಾವಳಿಯಿಂದ ಮನುಕುಲದ ಬಿರುಕುಗೊಂಡ ಸಂಬಂಧಗಳು ಬೆಸೆದು ಜೀವನ ವಿಧಾನದಲ್ಲಿ ಸಾಮರಸ್ಯ ಅಂಕುರಿಸುತ್ತದೆ ಎಂದು ಅಮ್ಮಿನಬಾವಿ-ವರೂರು ಜೈನಮಠಗಳ ಯತಿಗಳಾದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ನುಡಿದರು.
ಅವರು ಬುಧವಾರ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ಜಿನಾಲಯದಲ್ಲಿ ಹಮ್ಮಿಕೊಂಡಿದ್ದ 10 ದಿನಗಳ ದಶಲಕ್ಷಣ ಮಹಾಪರ್ವದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮನಾತನಾಡುತ್ತಿದ್ದರು. ಕ್ಷಮಾವಳಿಯಿಂದಾಗಿ ಆತ್ಮದ ಸ್ಥಿತಿಯು ದ್ವೇಷ, ವೈರುಧ್ಯ, ಸಂಘರ್ಷದಂತಹ ಜನವಿರೋಧಿ ಮನೋಭಾವಗಳಿಂದ ಮುಕ್ತವಾಗಿ ಅದು ಜಿನಸನ್ನಿಧಾನವನ್ನು ಬಯಸುತ್ತದೆ ಎಂದರು.
ಜೈನ ಧರ್ಮದ ತತ್ವಾದರ್ಶಗಳ ಚಿಂತನೆಯು ಮೋಕ್ಷ ಮಾರ್ಗ ಕೇಂದ್ರೀಕೃತವಾಗಿದೆ. ದಶಲಕ್ಷಣ ಪರ್ವದ ಸಂದರ್ಭದಲ್ಲಿ ನಡೆಸುವ ವಿಶೇಷ ಪೂಜಾದಿಗಳ ಮೂಲಕ ಶ್ರಾವಕ-ಶ್ರಾವಕಿಯರು ಕ್ರಿಯೆ, ಮಾತು ಮತ್ತು ಮನಸ್ಸುಗಳಲ್ಲಿ ಮಾಡಿರುವ ತಪ್ಪುಗಳಿಗೆ ಪ್ರಾಯಶ್ಚಿತ್ತ ಭಾವತನ್ಮಯತೆಯಲ್ಲಿ ಕ್ಷಮಾವಳಿಗೆ ಒಳಗಾಗಬೇಕಾಗುತ್ತದೆ ಎಂದೂ ಶ್ರೀಧರ್ಮಸೇನ ಭಟ್ಟಾರಕರು ಹೇಳಿದರು.
‘ಕ್ಷಮಾವಳಿ’ಕುರಿತು ಉಪನ್ಯಾಸ ನೀಡಿದ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಅಹಂಕಾರ ಮರೆತ ಮುಕ್ತ ಮನಸ್ಥಿತಿಯ ಕ್ಷಮಾವಳಿ ಫಲ ನೀಡುತ್ತದೆ. ಕ್ಷಮಾವಳಿ ಮತ್ತು ಅಹಿಂಸೆ ಒಟ್ಟೊಟ್ಟಿಗೇ ಇರುವುದರಿಂದ ಮಾಡಿರುವ ಪ್ರಮಾದಗಳು ಹಿಂಸೆಗೆ ಕಾರಣವಾಗದಂತೆ ತಪ್ಪೊಪ್ಪಿಕೊಂಡು ಮುಕ್ತವಾಗಿ ಕ್ಷಮೆಯಾಚನೆ ಮಾಡುವುದೇ ಕ್ಷಮಾವಳಿಯ ಬಹುಮುಖ್ಯ ಆಶಯವಾಗಿದೆ ಎಂದರು.
ತಾ.ಪಂ. ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್.ಪತ್ರಾವಳಿ, ದೀಪಕ ದೇಸಾಯಿ ಮಾತನಾಡಿದರು. ಜೈನ್ ಸಮಾಜದ ಮುಖಂಡ ಭುಜಬಲಿ ದೇಸಾಯಿ, ಶಂಕರ ರಾಘೂನವರ, ಈಶ್ವರ ಗಡೇಕಾರ, ನೇಮಣ್ಣ ಧಾರವಾಡ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸನ್ಮಾನ : ಪಮ್ಮಣ್ಣ ಧಾರವಾಡ, ಮಹಾವೀರ ಅಣ್ಣಿಗೇರಿ, ವಿದ್ಯಾರ್ಥಿಗಳಾದ ಅನುಷಾ ಕಿತ್ತೂರ ಹಾಗೂ ಸಮ್ಯಕ್ತಾ ಅಣ್ಣಿಗೇರಿ, ನಿತ್ಯವೂ ಪ್ರಸಾದ ಸಿದ್ಧಪಡಿಸಿದ ಸದಾನಂದ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ, ತ್ರಿಶಲಾಮಾತಾ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ದೇಸಾಯಿ, ಭೀಮಶಿ ಜಗಾಪೂರ, ಸಮ್ಮೇದ್ ಲೋಕೂರ, ಮಂಜುನಾಥ ಗುಡ್ಡದಮನಿ, ಬಾಳು ಧಾರವಾಡ, ಪ್ರಸನ್ನ ದೇಸಾಯಿ, ಭರತೇಶ ದೇಸಾಯಿ, ತವನಪ್ಪ ಲೋಕೂರ ನೇಮಿಚಂದ್ರ ನವಲೂರ ಇದ್ದರು.
ಅರ್ಚನಾ ಮೋರೆ ಸ್ವಾತಿಸಿದರು. ಅರುಣ ನವಲೂರ ನಿರೂಪಿಸಿದರು. ಬೀನಾ ದೇಸಾಯಿ ಹಾಗೂ ಲಲಿತಾ ದೇಸಾಯಿ ಭಕ್ತಿಗೀತೆ ಪ್ರಸ್ತುತಪಡಿಸಿದರು. ಶ್ರಾವಕಿಯರು ನೋಂಪಿ ಆಚರಿಸಿದರು. ಜಿನಾಲಯದಲ್ಲಿ ನಿತ್ಯವೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
—————————————-
ಫೋಟೋ ವಿವರ :
ಧಾರವಾಡ ತಾಲೂಕು ಅಮ್ಮಿನಬಾವಿ ಜಿನಾಲಯದಲ್ಲಿ ಜರುಗಿದ ದಶಲಕ್ಷಣ ಮಹಾಪರ್ವದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ವರೂರು ಜೈನಮಠದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಪಿ.ಎಸ್.ಪತ್ರಾವಳಿ, ಗುರುಮೂರ್ತಿ ಯರಗಂಬಳಿಮಠ, ಸುರೇಂದ್ರ ದೇಸಾಯಿ, ಭುಜಬಲಿ ದೇಸಾಯಿ, ಶಂಕರ ರಾಘೂನವರ ಹಾಗೂ ಶಶಿಕಲಾ ದೇಸಾಯಿ ಇದ್ದರು.