ಕೊಲಂಬೊ: ಸಾಮಾನ್ಯವಾಗಿ ಟೆಸ್ಟ್ ಪಂದ್ಯವು 5 ದಿನಗಳ ಕಾಲ ನಡೆಯುತ್ತದೆ. ಆದರೆ, ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧ 6 ದಿನಗಳ ಟೆಸ್ಟ್ ಆಡಲು ಮುಂದಾಗಿದೆ. ಅದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದರೆ, ಅದಕ್ಕೆ ಉತ್ತರ ನೀಡುತ್ತೇವೆ ನೋಡಿ.
ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್(NZ vs SL Test Series) ಮಧ್ಯೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮೊದಲ ಪಂದ್ಯ 6 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್ 18 ರಂದು ಪ್ರಾರಂಭವಾಗುವ ಮೊದಲ ಶ್ರೀಲಂಕಾ – ನ್ಯೂಜಿಲೆಂಡ್ ಟೆಸ್ಟ್ ಆರು ದಿನಗಳ ಕಾಲ ನಡೆಯಲಿದ್ದು, ಸೆಪ್ಟೆಂಬರ್ 21 ರಂದು ವಿಶ್ರಾಂತಿ ದಿನ ನಿಗದಿಪಡಿಸಲಾಗಿದೆ. ಹೀಗಾಗಿ ಅದು 6 ದಿನಗಳ ಕಾಲ ನಡೆಯಲಿದೆ.
ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ (Sri Lanka Presidential Election) ಸೆಪ್ಟೆಂಬರ್ 21ರಂದು ನಡೆಯಲಿದ್ದು, ಅಂದು ಆಟಕ್ಕೆ ಬ್ರೇಕ್ ಹಾಕಲಾಗಿದೆ. ಹೀಗಾಗಿ ಅಂದು ಆಟ ರದ್ದಾಗಿ ಸೆ.22ರಿಂದ ಟೆಸ್ಟ್ ಪಂದ್ಯ ಮುಂದುವರೆಯಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ.
ಶ್ರೀಲಂಕಾ ಕ್ರಿಕೆಟ್ (SLC) ನ್ಯೂಜಿಲೆಂಡ್ ವಿರುದ್ಧದ ಮುಂಬರುವ 2 ಪಂದ್ಯಗಳ ಟೆಸ್ಟ್ ಸರಣಿಯ ಪಂದ್ಯಗಳ ವೇಳಾ ಪಟ್ಟಿ ಪ್ರಕಟಿಸಿದ್ದು, ಎರಡೂ ಪಂದ್ಯಗಳು ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (JICS) ನಡೆಯಲಿವೆ. ಸರಣಿಯ ಮೊದಲ ಪಂದ್ಯವು ಸೆಪ್ಟೆಂಬರ್ 18 ರಂದು ಪ್ರಾರಂಭವಾಗಲಿದ್ದು, ಆರು ದಿನಗಳ ಕಾಲ ನಡೆಯಲಿದೆ. ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸೆಪ್ಟೆಂಬರ್ 26ರಿಂದ ಆರಂಭವಾಗಲಿದೆ.
20 ವರ್ಷಗಳ ನಂತರ ಶ್ರೀಲಂಕಾವು ಆರು ದಿನಗಳ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಲಿದೆ. 2001ರಲ್ಲಿ ಕೊಲಂಬೋದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಒಂದು ದಿನದ ಬ್ರೇಕ್ ನೀಡಲಾಗಿತ್ತು. 2008ರಲ್ಲಿ ಕೂಡ ಮತ್ತೊಂದು ಪಂದ್ಯ ಇದೇ ರೀತಿ ನಡೆದಿತ್ತು. ಬಾಂಗ್ಲಾದೇಶದ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ಶ್ರೀಲಂಕಾದ ವಿರುದ್ಧದ ಪಂದ್ಯವನ್ನು 6 ದಿನಗಳ ಕಾಲ ಆಡಿತ್ತು. ಈ ಟೂರ್ನಿ 2023-2025ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಭಾಗವಾಗಿದೆ. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು 4ನೇ ಸ್ಥಾನದಲ್ಲಿವೆ.