ಭಾರತಕ್ಕೆ ವಲಸೆ ಬರುತ್ತಿರುವ ಶ್ರೀಲಂಕಾದ ಪ್ರಜೆಗಳು
ತಮಿಳನಾಡು: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿ, ದೇಶ ದಿವಾಳಿಯಾಗುತ್ತಿದ್ದು, ಸದ್ಯ ಶ್ರೀಲಂಕಾ ಪ್ರಜೆಗಳು ಭಾರತದತ್ತ ವಲಸೆ ಬರುತ್ತಿದ್ದಾರೆ.
ಶ್ರೀಲಂಕಾದಲ್ಲಿ ಜೀವನ ಮಾಡಲು ಸಾಧ್ಯವಿಲ್ಲ ಎಂದು 15 ಜನ ಶ್ರೀಲಂಕನ್ ತಮಿಳರು ಆಶ್ರಯ ಕೇಳಿಕೊಂಡು ಭಾರತಕ್ಕೆ ಓಡಿ ಬಂದಿದ್ದಾರೆ. ತಮಿಳುನಾಡಿನ ಧನುಷ್ಕೋಡಿ ಕಡಲ ತೀರವನ್ನು ತಲುಪಿರುವ ಅವರನ್ನು ರಾಮೇಶ್ವರದ ಕಡಲ ಪೋಲೀಸರು ಹತ್ತಿರದ ಮಂಡಪಂ ಠಾಣೆಗೆ ಕರೆದೊಯ್ದಿದ್ದಾರೆ.
ಶ್ರೀಲಂಕಾದಲ್ಲಿ ಆಹಾರ ಪದಾರ್ಥಗಳಾದ ಅಕ್ಕಿ, ಗೋಧಿ,ಬೇಳೆ ಕಾಳುಗಳ ಬೆಲೆ ಗಗನಕ್ಕೇರಿದೆ. ಜನಸಾಮ್ಯಾನರು ಹೊತ್ತು ಊಟ ಮಾಡಲು ಪರದಾಡುತ್ತಿದ್ದಾರೆ. ಅಲ್ಲದೇ ಔಷಧಗಳು ಕೂಡ ಖಾಲಿಯಾಗಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳು ದೊರಕುತ್ತಿಲ್ಲ. ಸಾಮಾನ್ಯ ಜ್ವರ ಬಂದರೆ 4,000 ರೂ ಖರ್ಚುಮಾಡಬೇಕಾದ ಪರಿಸ್ಥಿತಿಯಿದೆ ಎಂದು ವಲಸೆ ಬಂದವರು ಅಳಲು ತೋಡಿಕೊಂಡಿದ್ದಾರೆ.
ಅಲ್ಲಿ ಜೀವನ ನಡೆಸಲು ಸಾಧ್ಯವಿಲ್ಲವೆಂದು ನಿನ್ನೆ ರಾತ್ರಿ ಜಾಫ್ನಾ ನಗರದಿಂದ ಹೊರಟು ಬಂದಿರುವ ಅವರನ್ನು ರಾಮೇಶ್ವರ ಕಡಲ ಪೋಲೀಸರು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.
ಅವರ ಪೈಕಿ ಒಬ್ಬರು ಮಾಧ್ಯಮಗಳಿಗೆ ಈ ರೀತಿಯಾಗಿ ಉತ್ತರಿಸಿದ್ದಾನೆ “ಅಲ್ಲಿ ಒಂದು ಕೆಜಿ ಅಕ್ಕಿಯ ಬೆಲೆ 300 ರೂಪಾಯಿ. ಹಸಿರುಮೆಣಸಿನಕಾಯಿಗೆ 1,000 ರುಪಾಯಿ ಕೊಡಬೇಕು. ನಾಲ್ಕು ಜನರ ಕುಟುಂಬಕ್ಕೆ ಎರಡು ಹೊತ್ತು ಹೊಟ್ಟೆ ತುಂಬಿಸಲು ಕನಿಷ್ಟ 3,000 ರೂ ಬೇಕಾಗುತ್ತದೆ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ, ನಮ್ಮ ಮಕ್ಕಳು ಹಸಿವಿನಿಂದ ಒದ್ದಾಡುವದನ್ನು ನೋಡಲಾಗದೇ ನಾವು ತಲಾ 20,000 ಕೊಟ್ಟು ಇಲ್ಲಿಗೆ ಓಡಿ ಬಂದಿದ್ದೇವೆ ಎಂದಿದ್ದಾರೆ.