ಸಿಗಂದೂರಿನ ಧಾರ್ಮಿಕ ರಾಜಕಾರಣ ಸುಲಭವಾಗಿ ಅರ್ಥವಾಗುವಂತದಲ್ಲ, ಇದು ಸಾವಿರ ಕೋವೆಗಳ ಹುತ್ತ; ಹುಂಡಿ ಕಾಸು ಹಂಚಿಕೆಯ ಪುಡಿಗಲಾಟೆ ನೋಡಿ ನಸು ನಕ್ಕಳು ಚೌಡಮ್ಮ
ಸಿಗಂದೂರು ಚೌಡಿಗುಡಿ ಈ ರಾಜ್ಯದ ಅಸಂಖ್ಯ ಭಕ್ತರ ಶ್ರದ್ಧಾ ಕೇಂದ್ರ. ಕೋರ್ಟು ಕಚೇರಿಗಳಲ್ಲಿ ಇತ್ಯರ್ಥವಾಗದಿದ್ದ ನೂರಾರು ವ್ಯಾಜ್ಯಗಳನ್ನು ಬಗೆಹರಿಸಿದ ನ್ಯಾಯಸ್ಥಾನ. ಮಾನಸಿಕವಾಗಿ ಕುಗ್ಗಿ ಬದುಕಿನಲ್ಲಿ ಭರವಸೆಯೇ ಕಳೆದುಕೊಂಡ ಅದೆಷ್ಟೋ ಜನರಿಗೆ ದಿವ್ಯ ಸಮಾಧಾನ ನೆಮ್ಮದಿ ನೀಡುವ ತಾಣ.
ಆಧ್ಯಾತ್ಮ ಪ್ರಿಯರಿಗೆ ಇಲ್ಲಿನ ಪ್ರಶಾಂತ ಪರಿಸರ ಚೇತೋಹಾರಿ ಅನುಭೂತಿ ನೀಡುತ್ತದೆ. ಪ್ರಕೃತಿ ಪ್ರಿಯರಿಗೆ ಚೌಡಿನೆಲೆಯ ಕಾಡು, ಹಿನ್ನೀರಿನ ಲಾಂಚ್ ಪ್ರಯಾಣ ಅದ್ಭುತ ಅನುಭವ ನೀಡುತ್ತದೆ.
ದೇಶದಲ್ಲೇ ಹೆಸರಾದ ಈ ಸಿಗಂದೂರು ಮೊನ್ನೆ ಮೊನ್ನೆ ಇದೆಲ್ಲಾ ಕಾರಣ ಹೊರತುಪಡಿಸಿ ಸುದ್ದಿಯಾಯಿತು. ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಸದ್ದು ಮಾಡಿತು. ಸಿಗಂದೂರಿನ ಆಡಳಿತದಲ್ಲಿ ಕೆಲಕಾಲದಿಂದ ತೆರೆಮರೆಯಲ್ಲೇ ನಡೆಯುತ್ತಿದ್ದ ಜಂಗೀಕುಸ್ತಿ ಮೊನ್ನೆ ಸ್ಫೋಟವಾಯಿತು.
ನಾಬಿಯೊಳಗೆ ಹುಟ್ಟಿದ ಬೆಂಕಿನ ಗಂಟಲಿನ ತನಕ ಬಂದಾಗಲೂ ಅದುಮಿಟ್ಟುಕೊಳ್ಳಲಾಗುತ್ತದೆ. ಬಾಯಿತುಂಬಿದಾಗ ಕಾರಲೇಬೇಕು. ಮೊನ್ನೆ ಸಿಗಂದೂರು ದೇವಾಲಯದ ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ಟರು ಮತ್ತು ಅವರ ತಮ್ಮ ಸುಬ್ರಾಯನಿಂದ ಜರುಗಿದ ವರ್ತನೆಯೂ ಇದೇ.
ಇಷ್ಟಕ್ಕೂ ಆಗಿದ್ದಿಷ್ಟೆ. ಮೊದಲನೆಯ ನವರಾತ್ರಿಗೂ ಮುನ್ನ ಅಮವಾಯಸ್ಯೆಯಂದು ಸಿಗಂದೂರು ಚೌಡಮ್ಮನ ಆಲಯದಲ್ಲಿ ಚಂಡಿಕಾ ಹೋಮ ನಡೆಸುವುದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ ಪರಂಪರೆ. ಆದರೆ ಈ ಬಾರಿ ಶೇಷಗಿರಿ ಭಟ್ಟರಿಗೆ ಚಂಡಿಕಾ ಹೋಮಕ್ಕೆ ಅವಕಾಶವಿರಲಿಲ್ಲ. ಅದಕ್ಕಾಗಿ ಮುನಿಸಿಕೊಂಡ ಭಟ್ಟರು ತಮ್ಮ ಪರಿವಾರ ಸಮೇತ ಚೌಡಮ್ಮನ ಮುಂದೆ ಧರಣಿ ಕೂತಿದ್ದರು. ಮೌನವ್ರತ ಆಚರಿಸುತ್ತಿದ್ದರು.
ಶೇಷಗಿರಿ ಭಟ್ಟರು ಕಾಂಪೌಂಡಿನಲ್ಲಿ ಗೂಡಂಗಡಿ ಇಟ್ಟುಕೊಂಡಿದ್ದ ಜೈನಧರ್ಮದ ದ್ಯಾವಪ್ಪ ಗೌಡರಿಗೂ ಶೇಷಗಿರಿ ಭಟ್ಟರಿಗೂ ನಡುವೆ ಇದ್ದ ವೈಮನಸ್ಯದಿಂದಾಗಿ ಶೇಷಗಿರಿ ಭಟ್ಟರ ಮೌನವ್ರತ ಮತ್ತು ಧರಣಿ ಕಥೆ ಮುಕ್ತಾಯ ಕಂಡಿತು. ಏಕಾಏಕಿ ದಾಂದಲೆ ಎಬ್ಬಿಸಿದ ಭಟ್ಟರ ತಮ್ಮ ಸುಬ್ರಾಯ ಮೈಮೇಲೆ ಸ್ವತಃ ಚೌಡಮ್ಮನೇ ಬಂದವನಂತೆ ಎಗರೆಗರಿ ಬಿದ್ದ.
ಕೋಪೋದ್ರಿಕ್ತನಾಗಿ ದೇವಾಲಯದ ಉದ್ದಕ್ಕೂ ಓಡಾಡಿದ ಧರಿಸಿದ್ದ ಉತ್ತರೀಯವನ್ನೇ ಪಾಶುಪತಾಸ್ತ್ರದಂತೆ ಹಿಡಿದು ಸಿಕ್ಕ ಸಿಕ್ಕವರಿಗೆಲ್ಲಾ ಬಡಿದ. ಕೈಗೆ ಸಿಕ್ಕ ತಾಮ್ರದ ಬಿಂದಿಗೆಯನ್ನು ಗದೆಯಂತ ಹಿಡಿದು ಆಡಳಿತ ಕಚೇರಿಯ ಮೇಲೆ ದಾಳಿ ಮಾಡಿದ. ಈ ವೇಳೆ ಮೌನವ್ರತದಲ್ಲೇ ಇದ್ದ ಶೇಷಗಿರಿ ಭಟ್ಟರ ಮುಖ ಧುಮುಧುಮು ಎನ್ನುತ್ತಿತ್ತು.
ತಮ್ಮನ ರೋಷಾವೇಷವನ್ನು ಕನಿಷ್ಟ ಕಂಟ್ರೋಲ್ ಮಾಡುವ ಪ್ರಯತ್ನವನ್ನೂ ಭಟ್ಟರು ಮಾಡಲಿಲ್ಲ. ಯಾಕಂದರೆ ಇದು ಇಂದು ನಿನ್ನೆಯ ಕೋಪಾಗ್ನಿಯಲ್ಲ. ಸಣ್ಣಕರುಳೋ ದೊಡ್ಡಕರುಳೋ ಮತ್ತೊಂದನ್ನೋ ದಾಟಿ ಇದು ಗಂಟಲು ತುಂಬಿಕೊಂಡಿತ್ತು. ಇದು ಇವತ್ತಲ್ಲ ನಾಳೆ ಹೀಗೆಯೇ ಆಗಬೇಕಿತ್ತು. ಮೊನ್ನೆ ಆಯಿತಷ್ಟೆ.
ಸಿಗಂದೂರೆಂಬ ಒಂದು ಸಣ್ಣ ದ್ವೀಪಕ್ಕ ಜಾಗತಿಕವಾಗಿ ಹೆಸರು ತಂದುಕೊಟ್ಟವರು ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ಟರು ಮತ್ತು ಧರ್ಮಾಧಿಕಾರಿ ಹೊಳೆಕೊಪ್ಪದ ರಾಮಪ್ಪ ಎನ್ನುವುದು ನಿರ್ವಿವಾಧಿತ ಸತ್ಯ; ಅದರಲ್ಲಿ ಎರಡನೇ ಮಾತೇ ಇಲ್ಲ. ನೀರಿನಲ್ಲಿ ಮುಳುಗಿದ್ದ ಚೌಡಿಕಲ್ಲು ಹೊಳೆಕೊಪ್ಪ ರಾಮಪ್ಪನವರ ಕುಟುಂಬದ ಅಧಿದೇವತೆ.
ಇದನ್ನು ತಂದು ಇಲ್ಲಿ ಪ್ರತಿಷ್ಟಾಪಿಸಿದ್ದು ಹೊಳೆಕೊಪ್ಪದ ರಾಮಪ್ಪನವರೇ, ಅರ್ಚಕರಾಗಿ ದೇವಿಯ ಪೂಜೆ, ಪುನಸ್ಕಾರ, ಆರಾಧನೆ, ಪಾರಾಯಣ, ಉಪಾಸನೆ ಮಾಡಿಕೊಂಡು ದಶಕಗಳಿಂದ ಚೌಡಮ್ಮನಷ್ಟೇ ಪ್ರಸಿದ್ಧರಾದವರು ಶೇಷಗಿರಿ ಭಟ್ಟರು. ತಮ್ಮ ರಾಮಚಂದ್ರಾಪುರ ಮಠದ ಸಂಸ್ಥಾನಕ್ಕೆ ಕಾಲಕಾಲಕ್ಕೆ ಕಪ್ಪ ಕೊಡುತ್ತಾ ಬಂದರು, ಚೌಡಮ್ಮನೇ ಮಂಕಾಗುವಷ್ಟು ಫಳಫಳಿಸುವ ರಾಘವೇಶ್ವರ ಶ್ರೀಗಳ ದೊಡ್ಡದೊಂದು ಫೋಟೋವನ್ನು ದೇಗುಲದಲ್ಲಿ ನೇತು ಹಾಕಿದರು.
ಆಗಿನಿಂದಲೇ ಈಡಿಗರ ಸಮುದಾಯದ ಕೆಲವರಿಗೆ ಇದು ಇರಿಸುಮುರಿಸು ಉಂಟುಮಾಡಿತ್ತು. ಸಿಗಂದೂರು ಎಷ್ಟೇ ಆದರೂ ಈಡಿಗರ ಕುಲದೇವಿ. ತಮ್ಮ ದೇವಸ್ಥಾನದ ಆದಾಯದ ಒಂದಂಶ ಬ್ರಾಹ್ಮಣ ಮಠಕ್ಕೆ ಹೋಗುತ್ತದೆ ಅನ್ನುವುದನ್ನು ಅವರಾದರೂ ಹೇಗೆ ಸಹಿಸಿಕೊಂಡಾರು? ಆದರೆ ಹೊಳೆಕೊಪ್ಪದ ರಾಮಪ್ಪನವರು ಧರ್ಮದರ್ಶಿಗಳಾಗಿ ಕೂತಿದ್ದರಲ್ಲ; ತುಟಿ ಎರಡು ಮಾಡದೇ. ಹಾಗಾಗಿ ಕೆಲವರಲ್ಲಿ ಈ ಅಸಮಧಾನ ಒಳಗೊಳಗೇ ಸುಡುತ್ತಿತ್ತು.
ಒಂದೆರಡು ವರ್ಷಗಳ ಹಿಂದೆ ಅತ್ಯಾಚಾರದ ಆರೋಪವಿರುವ ರಾಘವೇಶ್ವರ ಭಾರತಿ ಫೋಟೋವನ್ನು ದೇವಾಲಯದಿಂದ ತೆಗೆದುಹಾಕಬೇಕು ಎಂದು ಪ್ರಗತಿಪರ ಈಡಿಗ ಹುಡುಗರು ಸಿಗಂದೂರು ಚಲೋ ಮೆರವಣಿಗೆ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
https://youtu.be/i4pqp_mXDT0?t=2
ಆಗಲೂ ರಾಮಪ್ಪನವರದ್ದು ಅದೇ ಜಾಣ ಮೌನ. ಕಾರಣ ಸರಳ, ಸಿಗಂದೂರು ಜನಾರ್ಷಣೆಯ, ಧಾರ್ಮಿಕ ಭಕ್ತರ ಪಾಲಿನ ಸೂಜಿಗಲ್ಲಿನ ಆಕರ್ಷಣೆಯಾಗಿದ್ದು ಈಗೊಂದು ಹತ್ತು ಹನ್ನೆರಡು ವರ್ಷಗಳ ಹಿಂದಿನಿಂದ. ಅದಕ್ಕೂ ಮೊದಲು ಸಿಗಂದೂರಿಗೆ ಒಂದೋ ಎರಡೋ ಬಸ್ ಗಳು ಮಾತ್ರ ಹೋಗುತ್ತಿದ್ದವು. ಅಲ್ಲಿ ತಲೆ ಲೆಕ್ಕ ಹಾಕಬಹುದಾದಷ್ಟು ಭಕ್ತರು ಕಾಣಿಸುತ್ತಿದ್ದರು. ಯಾವಾಗ ಚೌಡಿಮಂದಿರಕ್ಕೆ ಭಕ್ತ ಜನರ ಪ್ರವಾಹವೇ ಶುರುವಾಯಿತೋ ದೇವಿ ಮಂದಿರದ ಹುಂಡಿಯೂ ತುಂಬಿ ಉಕ್ಕತೊಡಗಿತು.
ಕಚೇರಿಯಲ್ಲೊ ಫೋಟೋ, ಪ್ರಸಾದ, ಸ್ಟಾಂಪ್, ದೃಷ್ಟಿದಾರ, ಮಂತ್ರಿಸಿದ ತಾಯತ, ನಿಂಬೆಹಣ್ಣು, ತೆಂಗಿನಕಾಯಿ, ಸ್ಥಳ ಮಹಾತ್ಮೆ ಪುಸ್ತಕ, ತೀರ್ಥದ ಬಾಟಲಿ, ಇತ್ಯಾದಿಗಳ ಮಾರಾಟವೇ ಕೋಟಿಗಳ ಮೊತ್ತವನ್ನು ಖಜಾನೆಗೆ ತುಂಬಿಸತೊಡಗಿತು. ಈ ಖಜಾನೆಯ ಕೀಲಿಕೈ ಇದ್ದಿದ್ದು ಇದೇ ರಾಮಪ್ಪನವರು ಮತ್ತು ಶೇಷಗಿರಿ ಭಟ್ಟರ ಬಳಿ. ಇಬ್ಬರೂ ಸೇರಿ ಚೆನ್ನಾಗಿ ಹಣ ಮಾಡಿಕೊಂಡರು. ಕಾಡಿನ ಜಾಗದಲ್ಲಿ ಶೇಷಗಿರಿ ಭಟ್ಟರೂ ಮನೆ ಕಟ್ಟಿಕೊಂಡು ಸುತ್ತಮುತ್ತ ಒಂದಷ್ಟು ಜಾಗಕ್ಕೆ ಬೇಲಿ ಸುತ್ತಿದರು.
ಹೇಳುವವರು ಕೇಳುವವರಿಲ್ಲದೇ ಇವರಿಬ್ಬರ ದುಡಿಮೆ ಭರ್ಜರಿಯಾಗಿಯೇ ನಡೆಯಿತು. ಚೌಡಮ್ಮ ಸುಮ್ಮನೇ ನೋಡುತ್ತಾ ಕುಂತಿದ್ದಳು, ಇಬ್ಬರದ್ದೂ ಪಾಪದ ಅಕೌಂಟ್ ಭರ್ತಿಯಾಗಲಿ ಅಂತ ಕಾದಿದ್ದಳೇನೋ? ಕೊನೆಗೂ ದೇವಿಯ ಹೆಸರಲ್ಲಿ ಸಮೃದ್ಧ ಸಮಾರಾಧನೆ ನಡೆಸಿದ ಇಬ್ಬರ ಬಂಡವಾಳವೂ ಈಗ ಬಯಲಾಯಿತು. ಚೌಡಮ್ಮ ಮೂರ್ತಿಯೊಳಗಿಂದನೇ ನಸುನಕ್ಕಳು.
ಉಳಿದ ವಿಚಾರಗಳೇನೇ ಇರಲಿ ಕೊಂಚ ಮಟ್ಟಿಗೆ ಶೇಷಗಿರಿ ಭಟ್ಟರು ಸಮಾಜಮುಖಿ. ಪಾಪಪ್ರಜ್ಞೆ ಕಾಡುತ್ತಿತ್ತೇನೋ ಪಾಪ ಆಗೀಗ ಒಂದಷ್ಟು ದಾನಧರ್ಮಗಳನ್ನು ಮಾಡುತ್ತಿದ್ದರು. ಕಷ್ಟವೆಂದು ಬಂದವರಿಗೆ ತಮ್ಮಿಂದಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದರು. ಇದಕ್ಕೆ ಒಂದಷ್ಟು ಪ್ರಚಾರವನ್ನೂ ಪಡೆದುಕೊಳ್ಳುತ್ತಿದ್ದರು.
ತುಮರಿ, ಬ್ಯಾಕೋಡು ಭಾಗದಲ್ಲಿ ಭಟ್ಟರ ಪರವಾಗಿ ಯಾರೂ ಕೆಟ್ಟ ಮಾತಾಡುವುದಿಲ್ಲ. ಆದರೆ ಆಡಳಿತಾಧಿಕಾರಿಯಾದ ಸನ್ಮಾನ್ಯ ಹೊಳೆಕೊಪ್ಪದ ರಾಮಪ್ಪನವರು ತಮ್ಮ ಉಗುರಿನಲ್ಲಿ ತುಂಬಿಕೊಂಡ ಮಣ್ಣನ್ನೂ ಯಾರಿಗೂ ಕೊಡಲಾರದಷ್ಟು ಜುಗ್ಗ. ಇವರಿಂದ ಈಡಿಗ ಜಾತಿ ಬಾಂದವರಿಗೆ ನಯಾ ಪೈಸೆ ಪ್ರಯೋಜನವಾಗಿಲ್ಲ.
ಚೌಡಮ್ಮನ ಹುಂಡಿ ಹಣದ ಲೆಕ್ಕ ಕೇಳುವುದು ಬೇಡ. ಅದರಲ್ಲೀ ಒಂದೇ ಒಂದು ಪರ್ಸಂಟ್ ಹಣವನ್ನು ತುಮರಿ ಬ್ಯಾಕೋಡು ಭಾಗದ ಶರಾವತಿ ಸಂತ್ರಸ್ತರ ಕಲ್ಯಾಣಕ್ಕಾಗಿ, ಮೂಲಸೌಕರ್ಯ ಅಭಿವೃದ್ಧಿಗಾಗಿ, ಈಡಿಗ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟಿದ್ದರೂ ಸಾಕಿತ್ತು. ರಾಮಪ್ಪನವರು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಷ್ಟೇ ಜನಾನುರಾಗಿ ಮುಂದಾಳು ಆಗುತ್ತಿದ್ದರು.
ಕೋವಿಡ್ ಕಷ್ಟಕಾಲದಲ್ಲಿಯೂ ಒಂದೇ ಒಂದು ಕುಟುಂಬಕ್ಕೆ ಒಂದು ಸಣ್ಣ ಮೂಟೆ ಅಕ್ಕಿ ದಿನಸಿ ಕಳಿಸಲಿಲ್ಲ ರಾಮಪ್ಪನವರು. ಹಣದ ಹಂಚಿಕೆಯೇ ಭಟ್ಟರ ರಾಮಪ್ಪನವರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣ ಎನ್ನುವುದು ಜಗತ್ತಿಗೇ ಗೊತ್ತಿರುವ ಸತ್ಯ. ಇವರ ಶೀತಲ ಸಮರ ಹೀಗೆಯೇ ಮುಕ್ತಾಯಬೇಕು ಎನ್ನುವುದು ಖುದ್ದು ಚೌಡಮ್ಮನ ಯೋಜನೆಯಾಗಿತ್ತೇನೋ?
ಸಿಗಂದೂರಿನ ಚೌಡಮ್ಮನ ಸಮ್ಮುಖದಲ್ಲಿ ಮೊನ್ನೆ ನಡೆದ ಮಾರಾ ಮಾರಿ ಹಿಂದೆ ದೊಡ್ಡ ರಾಜಕಾರಣವೇ ಇದೆ. ಶಿವಮೊಗ್ಗ ಜಿಲ್ಲೆಯ ಪ್ರಭಾವಿ ಬಹುಸಂಖ್ಯಾತ ಈಡಿಗ ಸಮುದಾಯದ ಇಬ್ಬರು ಪ್ರಶ್ನಾತೀತ ನಾಯಕರಲ್ಲಿ ಒಬ್ಬರು ಬಂಗಾರಪ್ಪ ಇನ್ನೊಬ್ಬರು ಕಾಗೋಡು ತಿಮ್ಮಪ್ಪ. ಕಳೆದ ಚುನಾವಣೆಯಲ್ಲಿಯೇ ತಿಮ್ಮಪ್ಪ ಹೊಳೆಕೊಪ್ಪದ ರಾಮಪ್ಪನವರ ವಿಚಾರದಲ್ಲಿ ಮನಸು ಮುರಿದುಕೊಂಡರು. ಅದಕ್ಕಿಂತ ಮೊದಲೂ ತಿಮ್ಮಪ್ಪನವರ ಮತ್ತು ರಾಮಪ್ಪನವರ ಸಂಬಂಧ ಅಷ್ಟಕಷ್ಟೆಯೇ ಎಂಬಂತಿತ್ತು.
ಸಾಗರದ ಹಾಲಿ ಶಾಸಕರಾದ ಹಾಲಪ್ಪನವರು ಹೊಳೆಕೊಪ್ಪದ ರಾಮಪ್ಪನವರ ಹತ್ತಿರದ ಸಂಬಂಧಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈಡಿಗರ ಮತಗಳು ಸ್ಪಷ್ಟವಾಗಿ ಎರಡು ಭಾಗವಾಯಿತು. ಈಡಿಗರ ಹಿರೀಕರು ಅವತ್ತೂ ಇವತ್ತೂ ಕಾಗೋಡರನ್ನೇ ಬೆಂಬಲಿಸಿಕೊಂಡು ಬಂದ ಒಂದಷ್ಟು ಮಂದಿ ಈಗಲೂ ಕಾಗೋಡು ಪರವಾಗಿದ್ದಾರೆ. ಸಿಗಂದೂರು ದೇವಿಯ ಮಂದಿರ ಮುಜರಾಯಿ ಇಲಾಖೆಗೆ ಸೇರಲಿ ಎನ್ನುವುದು ಕಾಗೋಡು ಅಭಿಪ್ರಾಯವಾದರೂ ಇದನ್ನು ಬೆಂಬಲಿಸುವ ಜನರಿದ್ದಾರೆ.
ಮತ್ತೊಂದು ಬಹುಸಂಖ್ಯಾತ ಭಾಗ ಶಾಸಕ ಹಾಲಪ್ಪನವರ ಪರವಿದೆ. ಈ ವರ್ಗದಲ್ಲಿ ಸಿಗಂದೂರು ಕೇಂದ್ರಿತ ಈಡಿಗ ಸಮುದಾಯ ಮತ್ತು ಹೊಳೆಕೊಪ್ಪದ ರಾಮಪ್ಪನವ ಬೆಂಬಲಿಗರಿದ್ದಾರೆ. ಈಗ ಮತ್ತೂ ಒಂದು ಪಂಗಡವಿದೆ. ಅದು ಮಾಜೀ ಶಾಸಕ ಬೇಳೂರು ಗೋಪಾಲಕೃಷ್ಣನವರ ಪರವಿರುವ ಗುಂಪು. ಸದ್ಯಕ್ಕೆ ಕೆಪಿಸಿಸಿ ನೂತನ ವಕ್ತಾರರಾಗಿರುವ ಬೇಳೂರು ಸಿಗಂದೂರು ಭಿನ್ನಾಭಿಪ್ರಾಯದ ವಿಚಾರದಲ್ಲಿತ ಮೌನ ಮುರಿದಿಲ್ಲ.
ಅತ್ತ ಒಂದು ವೇಳೆ ಶೇಷಗಿರಿ ಭಟ್ಟರ ಹುತ್ತ ಒಡೆಯುವ ಮತ್ತು ಭಟ್ಟರನ್ನು ಸಿಗಂದೂರಿನಿಂದ ಗಡಿಪಾರು ಮಾಡುವ ಯೋಜನೆ ತಯಾರುಗುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಇದರ ಅರಿವಿರುವುದರಿಂದಲೇ ಭಟ್ಟರೂ ಸಹ ಚೌಡಮ್ಮನ ದೇಗುಲ ಮುಜರಾಯಿ ಇಲಾಖೆಗೆ ಸೇರಿಬಿಡಲಿ ತಾವು ಪ್ರಧಾನ ಅರ್ಚಕರಾಗಿ ಮುಂದುವರೆಯಬಹುದು ಎನ್ನುವ ಡಿಫನ್ಸ್ ಗೇಮ್ ಆಡುತ್ತಿದ್ದಾರೆ.
ಈ ಮಧ್ಯೆ ಸಿಗಂದೂರು ತಮ್ಮ ಸ್ವತ್ತು, ತಾವದರ ವಾರಸ್ದಾರರು ಎಂದುಕೊಂಡು ಮತ್ತೊಬ್ಬರ ರಂಗಪ್ರವೇಶವಾಗಿದೆ. ಸಿಗಂದೂರಿನ ದೇವಾಲಯಕ್ಕೆ ಸರ್ಕಾರ ಆಡಳಿತಾಧಿಕಾರಿ ನೇಮಕವಾಗಲಿ ಎನ್ನುವ ಆಗ್ರಹ ಕೇಳಿಬಂದಿದೆ. ಶಾಸಕರಾದ ಹಾಲಪ್ಪನವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಅರ್ಚಕ ಶೇಷಗಿರಿ ಭಟ್ಟರು ತಾವೇನೂ ಕಮ್ಮಿಯಿಲ್ಲ ಎಂದು ಸಾಬೀತುಮಾಡಲು ತಮ್ಮ ರಾಜಕೀಯ ಪ್ರಭಾವದ ಪ್ರತ್ಯಾಸ್ತ್ರದ ಶರ ಮಸೆಯುತ್ತಿದ್ದಾರೆ. ಪಿಚ್ಚರ್ ಅಬಿ ಬೀ ಬಾಕಿ ಹೈ. ಏನು ನಿನ್ನ ಲೀಲೇ ತಾಯಿ ಶ್ರೀ ಸಿಗಂದೂರೇಶ್ವರಿ ಚೌಡಮ್ಮ.
-ವಿಭಾ (ವಿಶ್ವಾಸ್ ಭಾರದ್ವಾಜ್)
ಮಾರ್ಜಾಲ ಮಂಥನ
***