ಬೆಂಗಳೂರು : ರಾಜ್ಯದಲ್ಲಿ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೊಮ್ಮೆ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಎಸ್‌ಎಸ್‌ಎಲ್ಸಿ ಪರೀಕ್ಷೆ ಮುಗಿಯುತ್ತಿದ್ದಂತೆ ಕಠಿಣ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆಗಳ ಕುರಿತಾಗಿ ಸಿಎಂ ಚರ್ಚಿಸಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಇದರ ಮಧ್ಯೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬಳಿಕ ಲಾಕ್ ಡೌನ್ ಮಾಡುವ ವಂದತಿ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದ್ದಾರೆ.
“ರಾಜ್ಯದಲ್ಲಿ ಮತ್ತೊಮ್ಮೆ ಕಂಪ್ಲೀಟ್ ಲಾಕ್ ಡೌನ್ ಮಾಡುವುದಿಲ್ಲ. ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ. ಟಾಸ್ಕ್ ಫೋರ್ಸ್ ಸಭೆಯಲ್ಲಿ ಲಾಕ್ ಡೌನ್ ಅಜೆಂಡಾ ಇರಲಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಇಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸೋಂಕಿತರ ಚಿಕಿತ್ಸೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಸೋಂಕಿತರಿಗೆ ವ್ಯವಸ್ಥಿತವಾಗಿ ಚಿಕಿತ್ಸೆ ಕೊಡಿಸುವ ಬಗ್ಗೆ ಚರ್ಚಿಸಲಾಗಿದ್ದು, ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು. ನೆಗೆಟಿವ್ ವರದಿ ಬಂದವರನ್ನು ಬಿಡುಗಡೆ ಮಾಡಲಾಗುವುದು. ಸೋಂಕು ತಡೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.








