ಬೆಂಗಳೂರು : ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ರಮ ಸರಿಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಬೆಂಗಳೂರು ನಗರದಲ್ಲಿ ಕಳೆದ ಮೂರು ದಿನಗಳಿಂದ ಕಾರ್ಮಿಕರನ್ನು ರಾಜ್ಯ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯನ್ನು ಜನತೆ ಗಮನಿಸುತ್ತಿದ್ದಾರೆ. ಊರುಗಳಿಗೆ ಹೋಗಲು ನಿರ್ಧರಿಸಿರುವ ಕಾರ್ಮಿಕರನ್ನು ಮೆಜೆಸ್ಟಿಕ್ ನಿಂದ ಅರಮನೆ ಮೈದಾನಕ್ಕೆ ಅಲ್ಲಿಂದ ಪೀಣ್ಯಕ್ಕೆ ಅಲೆದಾಸಲಾಗುತ್ತಿದೆ. ಲಗೇಜು ಹೊತ್ತು ಮಹಿಳೆಯರು, ಮಕ್ಕಳು ಅಲ್ಲಿಂದಿಲ್ಲಿಗೆ ಅಲೆದಾಡುತ್ತಿರುವುದನ್ನು ನೋಡಿದರೆ ಕಣ್ಣೀರು ಬರುತ್ತದೆ. ಈ ಸರ್ಕಾರಕ್ಕೆ ಹೃದಯ ಎಂಬುದು ಏನಾದರೂ ಇದೆಯೇ ಎಂದು ಗುಡುಗಿದರು.
ಬಸ್ಗಳಿಗೆ ಕಾಯುತ್ತಾ, ಅನ್ನ, ನೀರು ಇಲ್ಲದೆ, ಮಲಗಲು ಜಾಗವಿಲ್ಲದೆ ಬಸ್ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಪರದಾಡುತ್ತಿರುವುದನ್ನು ನೋಡಿಯೂ ಸರ್ಕಾರಕ್ಕೆ ಕನಿಕರ ಬರುತ್ತಿಲ್ಲ. ಕಾರ್ಮಿಕರಿಗೆ ಬಸ್ ಹತ್ತಲು ಸ್ಥಳ ನಿಗದಿ ಮಾಡಲು ಇರುವ ತೊಂದರೆಯಾದರೂ ಏನು. ವಲಸೆ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಆಗುತ್ತಿಲ್ಲ. ಕಾರ್ಮಿಕರ ಪ್ರಯಾಣಕ್ಕೆ ಮೂರು ಕೋಟಿ ರೂ. ವೆಚ್ಚ ಆಗಬಹುದು. ಅದನ್ನು ಭರಿಸುವ ಶಕ್ತಿಯೂ ಇಲ್ಲವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಈ ವರೆಗೆ ಬಂದಿರುವ ದೇಣಿಗೆ ಎಷ್ಟು ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ರಾಜ್ಯದ ಮುಖ್ಯಮಂತ್ರಿ ಫಂಡ್ ಗೆ ಬಹಳ ಹಣ ಬಂದಿದೆ. ಎಷ್ಟು ಹಣ ಖರ್ಚು ಮಾಡಲಾಯ್ತು. ಎಂಬ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು. ಪ್ರತಿಪಕ್ಷವಾದ ನಮಗೆ ಈ ಬಗ್ಗೆ ಮಾಹಿತಿ ಇಲ್ಲ. ಕಾರ್ಮಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳಬೇಡಿ. ಅವರಿಗೆ ಊಟ ಕೊಡಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.