ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ನಡುವಿನ ಜಮೀನು ಜಟಾಪಟಿ ಈಗ ತಾರಕಕ್ಕೇರಿದೆ. ಸಾಲಮನ್ನಾ ಮಾಡಲು ನೆಲಮಂಗಲದಲ್ಲಿರುವ ನಿಮ್ಮ ಜಮೀನು ಕೊಡಿ ಎಂಬ ಸಚಿವ ಹೆಚ್ ಸಿ ಬಾಲಕೃಷ್ಣ ಅವರ ಹೇಳಿಕೆಗೆ ಹಾಸನದಲ್ಲಿ ಕಿಡಿಕಾರಿದ ರೇವಣ್ಣ, ಸರ್ಕಾರ ದಿವಾಳಿಯಾಗಿದ್ದರೆ ರಾಜ್ಯದ ಹಿತದೃಷ್ಟಿಯಿಂದ ಹತ್ತತ್ತು ಎಕರೆ ಜಮೀನು ಕೊಡಲು ನಾನು ಸಿದ್ಧ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರ ಬರ್ಬಾದ್ ಆಗಿದೆ: ರೇವಣ್ಣ ಆಕ್ರೋಶ
ಸಚಿವ ಬಾಲಕೃಷ್ಣ ಅವರ ಸವಾಲನ್ನು ಸ್ವೀಕರಿಸಿದ ರೇವಣ್ಣ, ನೆಲಮಂಗಲದಲ್ಲಿ ನನ್ನ ಮಗನ ಹೆಸರಿನಲ್ಲಿ 10 ಎಕರೆ ಇದೆ, ನನ್ನ ಹೆಸರಿನಲ್ಲಿ 10 ಎಕರೆ ಇದೆ. ಒಂದು ವೇಳೆ ಈ ಸರ್ಕಾರ ನಡೆಸಲು ಖಜಾನೆಯಲ್ಲಿ ಕಾಸಿಲ್ಲದೆ ಸರ್ಕಾರ ದಿವಾಳಿಯಾಗಿದ್ದರೆ, ನನ್ನ ಜಮೀನಿನಲ್ಲಿ ಸರ್ಕಾರ ನಡೆಸಲಿ. ನಾನು ಆ ಜಮೀನನ್ನು ದಾನವಾಗಿ ಬರೆದುಕೊಡುತ್ತೇನೆ. ಅಷ್ಟೇ ಅಲ್ಲ, ನೆಲಮಂಗಲ ಬಿಟ್ಟು ಬೇರೆ ಕಡೆ ಎಲ್ಲಾದರೂ ಜಮೀನು ಬೇಕಿದ್ದರೂ ಕೊಡುತ್ತೇನೆ. ನಮಗಿಂತ ರಾಜ್ಯದ ಜನ ಉಳಿಯುವುದು ಮುಖ್ಯ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ ಎಂಬುದು ಈ ಹೇಳಿಕೆಗಳಿಂದ ಸಾಬೀತಾಗುತ್ತಿದೆ ಎಂದು ಅವರು ಕುಟುಕಿದ್ದಾರೆ.
ಲಂಚ ಕೊಡೋದು ಮಿನಿಸ್ಟರ್ ಆದೇಶ, ಅದನ್ನೇ ಪಾಲಿಸಿ: ಶಿವಲಿಂಗೇಗೌಡರಿಗೆ ವ್ಯಂಗ್ಯದ ಚಾಟಿ
ಇದೇ ವೇಳೆ, ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ ಎಂಬ ಸಚಿವ ಶಿವಲಿಂಗೇಗೌಡ ಅವರ ವಿವಾದಾತ್ಮಕ ಹೇಳಿಕೆಗೂ ರೇವಣ್ಣ ಲೇವಡಿ ಮಾಡಿದ್ದಾರೆ. ಶಿವಲಿಂಗೇಗೌಡರು ನಿಜವನ್ನೇ ಹೇಳಿದ್ದಾರೆ. ಈಗ ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಕೈಬಿಸಿ ಮಾಡದೆ ಒಂದು ಕೆಲಸವೂ ಆಗಲ್ಲ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಲಂಚ ಕೊಡೋದು ಧರ್ಮ ಅಂದ ಮೇಲೆ ನಮ್ಮದು ಏನಿದೆ? ಜಿಲ್ಲೆಯ ಜನರು ಅವರ ಆದೇಶವನ್ನು ಪಾಲಿಸಲಿ. ಕೊಟ್ಟಾದ್ರೂ ಕೆಲಸ ಮಾಡಿಸಿಕೊಳ್ಳಿ ಎಂದು ರೇವಣ್ಣ ವ್ಯಂಗ್ಯವಾಗಿ ಹರಿಹಾಯ್ದಿದ್ದಾರೆ.
ಅಧಿಕಾರಿಗಳಿಗೆ ಗೌರವಯುತವಾಗಿ ಕೊಡದಿದ್ದರೆ ಕೆಲಸ ನಡೆಯುವುದಿಲ್ಲ ಎಂಬ ಕಹಿ ಸತ್ಯವನ್ನು ಸಚಿವರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಜನರ ಹತ್ತಿರ ಏನಾಗುತ್ತೋ ಅದನ್ನು ಕೊಟ್ಟು ಕೆಲಸ ಮಾಡಿಸಿಕೊಳ್ಳಿ ಎಂದು ರೇವಣ್ಣ ನೀಡಿರುವ ಈ ಟಾಂಗ್, ಕಾಂಗ್ರೆಸ್ ಸರ್ಕಾರದಲ್ಲಿನ ಭ್ರಷ್ಟಾಚಾರದ ಸ್ಥಿತಿಗೆ ಕನ್ನಡಿ ಹಿಡಿದಿದೆ. ಒಟ್ಟಾರೆಯಾಗಿ ಜಮೀನು ದಾನ ಮತ್ತು ಲಂಚದ ವಿಚಾರವಾಗಿ ರೇವಣ್ಣ ಅವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.







