ಸದ್ಯ ವಿಶ್ವ ಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸ್ ಮೆನ್ ಯಾರು ? ಈ ಪ್ರಶ್ನೆಗೆ ಉತ್ತರ ಆ ಎರಡು ಹೆಸರುಗಳು. ಹೌದು, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಭಾರತದ ವಿರಾಟ್ ಕೊಹ್ಲಿ. ಹಾಗಿದ್ರೆ ಸ್ಟೀವ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿ ಒಬ್ಬರನ್ನೊಬ್ಬರ ಬಗ್ಗೆ ಏನು ಹೇಳಬಹುದು ? ಅದ್ರಲ್ಲೂ ವಿರಾಟ್ ಬಗ್ಗೆ ಸ್ಟೀವ್ ಸ್ಮಿತ್ ಏನು ಹೇಳಬಹುದು ? ಈ ಪ್ರಶ್ನೆಗಳಿಗೆ ಸ್ಮಿತ್ ನೀಡಿರುವ ಉತ್ತರ ಕೇಳಿದ್ರೆ ನೀವೂ ಅಚ್ಚರಿಯಾಗಬಹುದು.
ಯಾಕಂದ್ರೆ ಮೈದಾನದಲ್ಲಿ ತನ್ನ ಪ್ರತಿಸ್ಪರ್ಧಿಯಾಗಿದ್ರೂ ಸ್ಟೀವನ್ ಸ್ಮಿತ್, ವಿರಾಟ್ ಕೊಹ್ಲಿಯವರನ್ನು ಮನಸಾರೆ ಕೊಂಡಾಡಿದ್ದಾರೆ. ಅದ್ರಲ್ಲೂ ಕೊಹ್ಲಿ ಆಟವನ್ನು ಕೇವಲ ನಾಲ್ಕೇ ನಾಲ್ಕು ಪದಗಳಲ್ಲಿ ವರ್ಣನೆ ಮಾಡಿದ್ದಾರೆ. ಅದ್ಭುತ, ನಂಬಲು ಅಸಾಧ್ಯವಾದವ, ಫಿಟ್ ಮತ್ತು ಪವರ್‍ಫುಲ್ ಅಂತ ಸ್ಮೀವನ್ ಸ್ಮಿತ್ ಕೊಹ್ಲಿಯರವರ ಬ್ಯಾಟಿಂಗ್ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿಯ ಬಗ್ಗೆ ನನಗೆ ಹೆಮ್ಮೆ ಇದೆ. ಆತ ಒಬ್ಬ ಅದ್ಭುತ ಆಟಗಾರ. ಆತನ ದಾಖಲೆಗಳನ್ನೇ ನೋಡಿ. ಅದನ್ನು ನಂಬಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್‍ಗೆ ಆತನ ಕೊಡುಗೆ ಅನನ್ಯ. ಭಾರತೀಯ ಕ್ರಿಕೆಟ್ ತಂಡ ಇಂದು ಯಾವ ಮಟ್ಟದಲ್ಲಿ ಆಡುತ್ತಿದೆಯೋ ಅದಕ್ಕೆ ಕಾರಣ ವಿರಾಟ್ ಕೊಹ್ಲಿ ಅಂತ ಸ್ಟೀವನ್ ಸ್ಮಿತ್ ಹೇಳಿದ್ರು. ಆತನ ಆಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಅಲ್ಲದೆ ವಿರಾಟ್ ಫಿಟ್ ಆಗಿಯೂ ಇದ್ದಾರೆ. ಪವರ್‍ಫುಲ್ ಆಗಿಯೂ ಬೆಳೆದುಬಿಟ್ಟಿದ್ದಾರೆ. ಆದ್ರೆ ನನಗೆ ಆತನ ಆ ಒಂದು ಸಾಮಾಥ್ರ್ಯದ ಬಗ್ಗೆ ಒಂಥರಾ ಮೆಚ್ಚುಗೆ ಇದೆ. ಅಚ್ಚರಿಯೂ ಇದೆ ಅಂತಾರೆ ಸ್ಮಿತ್. ಸವಾಲುಗಳನ್ನು ಬೆನ್ನಟ್ಟುವಾಗ ಅದ್ರಲ್ಲೂ ವೈಟ್ ಬಾಲ್ ಚೆಂಡಿನಲ್ಲಿ ಆತನ ದಾಖಲೆಗಳೇ ಅದ್ಭುತವಾಗಿವೆ. ಏಕದಿನ ಕ್ರಿಕೆಟ್ ನಲ್ಲಿ ಗೆಲುವಿನ ಸರಾಸರಿಯನ್ನು ನೋಡಿದಾಗ ಆತ ಅದ್ಭುತವಾಗಿ ಕಾಣಿಸುತ್ತಾನೆ ಅಂತ ಸ್ಮಿತ್ ಅವರು ಕೊಹ್ಲಿಯವರ ಬ್ಯಾಟಿಂಗ್ ಶೈಲಿಯನ್ನು ಗುಣಗಾನ ಮಾಡಿದ್ದಾರೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಸ್ಮಿತ್ ಮತ್ತು ಕೊಹ್ಲಿ ಅಗ್ರ ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಟೀಮ್ ಇಂಡಿಯಾ ಮೊದಲ ಬಾರಿ ಸರಣಿಯನ್ನು ಗೆದ್ದುಕೊಂಡಿತ್ತು. ಆದ್ರೆ ಆ ಸರಣಿಗೆ ಸ್ಮಿತ್ ಮತ್ತು ವಾರ್ನರ್ ಅಲಭ್ಯರಾಗಿದ್ದರು. ಇದೀಗ ಮುಂದಿನ ಡಿಸೆಂಬರ್ ನಲ್ಲಿ ಭಾರತ ಮತ್ತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯ ಬಗ್ಗೆ ಮಾತನಾಡಿದ ಸ್ಮಿತ್, ಈ ಸರಣಿಯಲ್ಲಿ ಸಾಕಷ್ಟು ಸವಾಲುಗಳಿವೆ. ಟೀಮ್ ಇಂಡಿಯಾ ಒಂದು ಅದ್ಭುತವಾದ ತಂಡ. ವಿರಾಟ್, ಪೂಜಾರ, ಅಜ್ಯಂಕ್ಯಾ ರಹಾನೆ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಹೀಗೆ ಎಲ್ಲರೂ ಅತ್ಯುತ್ತಮ ಆಟಗಾರರು. ಹಾಗೇ ಬ್ಯಾಟಿಂಗ್ ನಂತೆ ಟೀಮ್ ಇಂಡಿಯಾದಲ್ಲೂ ಶ್ರೇಷ್ಠ ಬೌಲರ್‍ಗಳು ಇದ್ದಾರೆ. ಮಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ, ಇಶಾಂತ್ ಶರ್ಮಾ ಈ ಹಿಂದೆಯೂ ಉತ್ತಮ ನಿರ್ವಹನೆಯನ್ನು ನೀಡಿದ್ದಾರೆ. ಹೀಗಾಗಿ ಇದೊಂದು ಜಿದ್ದಾಜಿದ್ದಿನ ಸರಣಿಯಾಗಲಿದೆ ಎಂದು ಸ್ಟೀವನ್ ಸ್ಮಿತ್ ಅಭಿಪ್ರಾಯಪಟ್ಟರು.








