ಬೆಂಗಳೂರು: ರಾಜ್ಯ ಸರ್ಕಾರದ ವಿದ್ಯಾಗಮ ಯೋಜನೆ `ಕೊರೊನಾಗಮ’ವಾಗಿ ಸರಣಿ ಶಿಕ್ಷಕರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಕ್ರೋಶ ತೀವ್ರಗೊಂಡಿದೆ.
ಮಕ್ಕಳು ಹಾಗೂ ಶಿಕ್ಷಕರ ಪಾಲಿಗೆ ಕಂಟಕಪ್ರಾಯವಾಗುತ್ತಿರುವ ವಿದ್ಯಾಗಮ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲವಾದರೆ ಸೋಮವಾರದಿಂದ ಶಿಕ್ಷಕರ ಜೊತೆ ಅಹೋರಾತ್ರಿ ಹೋರಾಟ ನಡೆಸುತ್ತೇನೆ. ಸೋಮವಾರದೊಳಗೆ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆ ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗಡುವು ನೀಡಿದ್ದಾರೆ.

ವಿದ್ಯಾಗಮ ಯೋಜನೆ ನಿಲ್ಲಿಸದೇ ಇದ್ದರೆ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸೋಮವಾರದಿಂದ ಅಹೋರಾತ್ರಿ ಚಳವಳಿ ಆರಂಭವಾಗಲಿದೆ. ಶಿಕ್ಷಣ ಇಲಾಖೆ ಯೋಜನೆ ವಿಚಾರದಲ್ಲಿ ಪ್ರತಿಷ್ಠೆಯಾಗಿ ಸ್ವೀಕರಿಸಬಾರದು. ಯಾವ ಪುರುಷಾರ್ಥಕ್ಕಾಗಿ ಯೋಜನೆ ಮುಂದುವರೆಸುತ್ತೀರಿ ಎಂದು ಹೆಚ್‍ಡಿಕೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೊರೊನಾ ವಿಚಾರದಲ್ಲಿ ಮಕ್ಕಳು ಹಾಗೂ ಶಿಕ್ಷಕರ ಆರೋಗ್ಯ ಮುಖ್ಯ. ಮಕ್ಕಳ ಜೀವಕ್ಕಿಂತ ವಿದ್ಯಾಗಮ ಮುಖ್ಯವಾ ? ವಿದ್ಯಾಗಮ ನಿಲ್ಲಿಸಿ, ಮಕ್ಕಳ ಜೀವ ಉಳಿಸಿ. ಯೋಜನೆಯನ್ನು ಮುಂದುರೆಸದೇ ಸ್ಥಗಿತಗೊಳಿಸಿ, ಇನ್ನವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ. ನಾನೇ ಧರಿಣಿ ಕೂರುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಕುಮಾರಸ್ವಾಮಿ, ಮಕ್ಕಳನ್ನು ವಿದ್ಯಾಗಮ ತರಗತಿಗೆ ಕಳಿಸದಂತೆ ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಲಾಕ್‍ಡೌನ್ ನಂತರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಖಾಸಗಿ ಶಾಲೆಗಳ ಮಕ್ಕಳು ಹಾಗೂ ಹೀಗೂ ಆನ್‍ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕಲಿಕೆಯಿಂದ ದೂರ ಉಳಿಯಬಾರದೆಂಬ ಕಾರಣಕ್ಕೆ ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆ ಆರಂಭಿಸಿತ್ತು. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಶಾಲೆ ವತಿಯಿಂದ ವಠಾರ ಶಾಲೆಗಳನ್ನು ತೆರೆದು ಸರ್ಕಾರಿ ಶಾಲೆಗಳ ಮಕ್ಕಳಿಗೆ ಶಿಕ್ಷಕರಿಂದ ಪಾಠ ಪ್ರವಚನ ಮಾಡಿಸುತ್ತಿದೆ. ಆದರೆ, ವಠಾರ ಶಾಲೆಗೆ ಹೋಗುತ್ತಿದ್ದ ನಾಲ್ಕು ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿರುವುದು ರಾಜ್ಯಾದ್ಯಂತ ಪೋಷಕರ ಆತಂಕಕ್ಕೆ ಕಾರಣವಾಗಿದೆ.








