ಪೈ ಚಕ್ಕರ್…ಕ್ರಿಕೆಟ್ ಆಟದಲ್ಲಿ ಇಂತಹುದ್ದೊಂದು ಹೆಸರೂ ಇದೆ. ಪೈ ಚಕ್ಕರ್ ಅಂದ್ರೆ ಚೆಂಡಿನ ಚಲನೆಯ ಮೇಲೆ ನಿಯಂತ್ರಣವಿಲ್ಲದ ಬೌಲರ್. ಅಂದ ಹಾಗೇ ಕ್ರಿಕೆಟ್ ಮೈದಾನದಲ್ಲಿ ಈ ಹೆಸರು ಬಹುಶಃ ಮೊದಲು ಕೇಳಿ ಬಂದಿದ್ದು ಸುಮಾರು 12 ವರ್ಷಗಳ ಹಿಂದೆ ಅಂತ ಅನ್ಸುತ್ತೆ. ಅಷ್ಟಕ್ಕೂ ಪೈ ಚಕ್ಕರ್ ಅನ್ನೋ ಹೆಸರು ಹುಟ್ಟಿಕೊಂಡಿರುವ ಬಗ್ಗೆ ಒಂದು ಸ್ವಾರಸ್ಯಕರವಾದ ಘಟನೆಯೂ ಇದೆ.
ಹೌದು, ಪೈ ಚಕ್ಕರ್ ಅಂತ ಹೆಸರು ಇರೋದು ನಮ್ಮ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್. ಈ ಹೆಸರು ಹಿಡಿದು ಕರೆದಿದ್ದು ಇಂಗ್ಲೆಂಡ್ನ ಒರಟ ಕೇವಿನ್ ಪೀಟರ್ಸನ್. ಅದು 2008ರಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯ. ಈ ಪಂದ್ಯದಲ್ಲಿ ಪಾರ್ಟ್ ಟೈಮ್ ಬೌಲರ್ ಹಾಗೂ ಲೆಗ್ ಸ್ಪಿನ್ನರ್ ಯುವರಾಜ್ ಸಿಂಗ್, ಕೇವಿನ್ ಪೀಟರ್ಸನ್ಗೆ ಪೆವಿಲಿಯನ್ ದಾರಿ ತೋರಿಸಿದ್ದರು. ಆಗ ಸಿಡಿಮಿಡಿಗೊಂಡ ಕೇವಿನ್ ಪೀಟರ್ಸನ್ ಯುವರಾಜ್ ಸಿಂಗ್ ಬಳಿ ಬಂದು ನಿನ್ನ ಎಡಗೈ ಹೊಲಸು ಅಂತ ಹೇಳಿದ್ದರು. ಆದ್ರೆ ಯುವರಾಜ್ ಸಿಟ್ಟು ಮಾಡಿಕೊಳ್ಳಲಿಲ್ಲ. ನಗುತ್ತಲೇ ಕೇವಿನ್ ಪೀಟರ್ಸನ್ ಅವರ ಮಾತನ್ನು ಸ್ವೀಕರಿಸಿದ್ದರು. ಆದಾದ ನಂತರ ಇಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಹಾಗೂ ಇಮೇಲ್ಗಳಲ್ಲಿ ಪರಸ್ಪರ ತಮಾಸೆಗಾಗಿ ಜಗಳ ಮಾಡಿಕೊಳ್ಳುತ್ತಿದ್ರಂತೆ. ಅಲ್ಲದೆ ಪೀಟರ್ಸನ್ ಪೈ ಚಕ್ಕರ್ ಅಂತನೂ ಕರೆಯುತ್ತಿದ್ದರು.
ಆದ್ರೆ ಯಾಕೋ ಪೀಟರ್ಸನ್ ಹೇಳಿದ್ದ ಪೈ ಚಕ್ಕರ್ ಪದ ಯುವಿಗೆ ಇಷ್ಟವಾಗಿ ಹೋಯ್ತು. ಅದಕ್ಕಾಗಿಯೇ ಯುವರಾಜ್ ಸಿಂಗ್, ಪೈ ಚಕ್ಕರ್ ಅಂತನೇ ಇಮೇಲ್ ವಿಳಾಸವನ್ನು ಕ್ರಿಯೇಟ್ ಮಾಡಿಕೊಂಡಿದ್ದಾರೆ. ನನ್ನ ಬೌಲಿಂಗ್ ಬಗ್ಗೆ ಪೀಟರ್ಸನ್ ಹೇಳಿರುವ ಪೈ ಚಕ್ಕರ್ ಪದಗಳೇ ನನ್ನ ಇಮೇಲ್ ವಿಳಾಸವಾಗಿದೆ. ಪೈ ಚಕ್ಕರ್ ಅನ್ನೋದು ನನ್ನ ನೆಚ್ಚಿನ ಇಮೇಲ್ ವಿಳಾಸವಾಗಿದೆ. ಪೀಟರ್ಸನ್ ನನ್ನನ್ನು ಆ ರೀತಿ ಕರೆದಾಗ ನನಗೆ ಕೋಪ ಬಂದಿರಲಿಲ್ಲ. ಅವರ ಬಗ್ಗೆ ಕೆಟ್ಟದ್ದಾಗಿ ಭಾವನೆಯೂ ಬರಲಿಲ್ಲ. ನಾನು ಆ ರೀತಿ ಕರೆದಾಗ ಮನಸಾರೆ ನಕ್ಕಿದ್ದೆ. ಇದ್ರಿಂದಾಗಿ ನನ್ನನ್ನು ಈಗಲೂ ಕೆಲವು ಸ್ನೇಹಿತರು ಪೈ ಚಕ್ಕರ್ ಅಂತನೇ ತಮಾಷೆಯಾಗಿ ಕರೆಯುತ್ತಾರೆ ಅಂತ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ಲಾಕ್ ಡೌನ್ ಟೈಮ್ ನಲ್ಲಿ ಯುವರಾಜ್ ಸಿಂಗ್ ಇನ್ಸ್ಟಾಗ್ರಾಂ ಲೈವ್ನಲ್ಲಿ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಮಾತನಾಡಿದ್ದ ಕೇವಿನ್ ಪೀಟರ್ಸನ್ ತನ್ನ ಕ್ರಿಕೆಟ್ ಬದುಕಿನ ವೀಕ್ನೆಸ್ ಏನು ಎಂಬುದನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹೇಳಿಕೊಂಡಿದ್ದಾರೆ. ಅಂದ ಹಾಗೇ ಕೇವಿನ್ ಪೀಟರ್ಸನ್ ಎಡಗೈ ಸ್ಪಿನ್ನರ್ಗಳ ಎದುರು ಬ್ಯಾಟಿಂಗ್ ಮಾಡುವಾಗ ಸಾಕಷ್ಟು ಗೊಂದಲಕ್ಕಿಡಾಗುತ್ತಾರೆ. ಎಡಗೈ ಸ್ಪಿನ್ನರ್ಗಳನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಚಡಪಡಿಸುತ್ತಾರೆ. ಹೀಗಾಗಿ ಕೆಪಿ, ಸಾಕಷ್ಟು ಬಾರಿ ಎಡಗೈ ಸ್ಪಿನ್ನರ್ಗಳಿಗೆ ತನ್ನ ವಿಕೆಟ್ ಅನ್ನು ಒಪ್ಪಿಸಿದ್ದಾರೆ. ಹೌದು, ನಾನು ಪ್ರತಿ ಬಾರಿ ಬ್ಯಾಟಿಂಗ್ ಮಾಡುವಾಗ ಎದುರಾಳಿ ತಂಡದ ನಾಯಕ ಎಡಗೈ ಸ್ಪಿನ್ನರ್ಗಳನ್ನು ನನ್ನ ಮುಂದೆ ಕಣಕ್ಕಿಳಿಸುತ್ತಿದ್ದರು. ಅಂತಾರಾಷ್ಟ್ರೀಯ, ದೇಶಿಯ ಪಂದ್ಯ ಬಿಡಿ, ಸಹಾಯಾರ್ಥ ಪಂದ್ಯದಲ್ಲೂ ಇದೇ ರೀತಿ ಮಾಡಿದ್ದರು. ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ ಸಹಾಯಾರ್ಥ ಪಂದ್ಯದಲ್ಲಿ ಆಡುವಾಗ ಕೂಡ ನನ್ನ ವಿರುದ್ಧ ಎಡಗೈ ಸ್ಪಿನ್ನರ್ನನ್ನು ಕಣಕ್ಕಿಳಿಸಿ ನನ್ನನ್ನು ವಿಕೆಟ್ ಒಪ್ಪಿಸುವಂತೆ ಮಾಡಿದ್ದರು. ಇದು ನನ್ನನ್ನು ಇಂದಿಗೂ ಕಾಡುತ್ತಿದೆ ಎಂದು ಪೀಟರ್ಸನ್ ಹೇಳಿದ್ದಾರೆ.