ಬೆಂಗಳೂರು : 15 ವರ್ಷದ ವಿದ್ಯಾರ್ಥಿನಿ ಅಪಾರ್ಟ್ಮೆಂಟ್ ನ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳ್ಳಂದೂರಿನ (Bellandoor) ಕ್ಲಾಸಿಕ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ಜೆಸ್ಸಿಕಾ ಸಾವನ್ನಪ್ಪಿದ ಬಾಲಕಿ. ಬಾಲಕಿಯು ತನ್ನ ತಾಯಿ ಹಾಗೂ ತಂದೆಯೊಂದಿಗೆ 11ನೇ ಮಹಡಿಯಲ್ಲಿ ವಾಸವಿದ್ದಳು. ಈ ಕುಟುಂಬ ಮೂಲತಃ ತಮಿಳುನಾಡಿನವರು. ತಂದೆ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಜೆಸ್ಸಿಕಾ 10ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ.
ಜೆಸ್ಸಿಕಾ ಇತ್ತೀಚೆಗೆ ಶಾಲೆಗೂ ಸರಿಯಾಗಿ ಹೋಗುತ್ತಿರಲಿಲ್ಲ ಎಂದು ತಿಳಿದು ಬಂದಿದ್ದು, ಕಳೆದ 3 ತಿಂಗಳಲ್ಲಿ ಕೇವಲ 6 ದಿನ ಮಾತ್ರ ಶಾಲೆಗೆ ಹೋಗಿದ್ದಳು. ಇಂದು ಕೂಡ ಶಾಲೆಗೆ ಹೋಗುವುದಾಗಿಯೇ ಹೇಳಿದ್ದಳು. ನಂತರ ಮನೆಗೆ ವಾಪಸ್ ಬಂದಿದ್ದಾಳೆ. ಬಳಿಕ ಟೀಚರ್ ತಾಯಿಗೆ ಕರೆ ಮಾಡಿ ಮಗಳು ಶಾಲೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ನಂತರ ಪೋಷಕರು ಪರಿಶೀಲನೆ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಮನೆಯಲ್ಲಿ, ಅಕ್ಕ-ಪಕ್ಕದಲ್ಲಿ ಯಾರೂ ಇಲ್ಲದ ಸಂದರ್ಭ 12ನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಪ್ರಾಥಮಿಕವಾಗಿ ಬಾಲಕಿ ಶಾಲೆಗೆ ಹೋಗಿ ಕ್ಲಾಸ್ ಅಟೆಂಡ್ ಮಾಡದೆ ಮರಳಿ ಬರುತ್ತಿದ್ದಳು ಎನ್ನಲಾಗಿದೆ. ಆಕೆ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.