ರ್ಯಾಗಿಂಗ್ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲರ ಮೇಲೆಯೇ ಹಲ್ಲೆ ಮಾಡಿದ ವಿದ್ಯಾರ್ಥಿಗಳು..!
ಮಂಗಳೂರು : ರ್ಯಾಗಿಂಗ್ ಮಾಡಿದನ್ನ ಪ್ರಶ್ನಿಸಿ ಬುದ್ದಿ ಹೇಳಿದ್ದಕ್ಕೆ ಕಾಲೇಜಿನ ಪ್ರಾಂಶುಪಾಲರ ಮೇಲೆಯೇ ವಿದ್ಯಾರ್ಥಿಗಳು ಹಲ್ಲೆ ನಡೆಸಿ ಗೂಂಡಾ ವರ್ತನೆ ತೋರಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸುರತ್ಕಲ್ ಬಳಿಯ ಮುಕ್ಕದ ಶ್ರೀನಿವಾಸ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಪ್ರಾಂಶುಪಾಲರಿಗೇ ನಾಲ್ವರು ವಿದ್ಯಾರ್ಥಿಗಳು ಸೇರಿ ಹಲ್ಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ರ್ಯಾಗಿಂಗ್ ನಡೆಸಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಅದರಂತೆ ನಾಲ್ವರು ವಿದ್ಯಾರ್ಥಿಗಳನ್ನು ಕರೆದ ಪ್ರಾಂಶುಪಾಲರು ಬುದ್ಧಿಮಾತು ಹೇಳಿದ್ದಲ್ಲದೆ, ಇದನ್ನು ಹೀಗೆ ಮುಂದುವರಿಸಿದರೆ ಕಾಲೇಜಿನಿಂದ ಡಿಬಾರ್ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳಾದ ಮಹಮ್ಮದ್ ಬಾಝಿಲ್, ಸಂಭ್ರಮ್ ಆಳ್ವ, ಸಮೀಲ್, ಅಶ್ವಿನ್ ಎಸ್. ಜಾನ್ಸನ್ ಎಂಬ ವಿದ್ಯಾರ್ಥಿಗಳು ಇಂತಹ ಕೃತ್ಯವೆಸಗಿದ್ದಾರೆ.
ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಹಲ್ಲೆ ಮತ್ತು ರ್ಯಾಗಿಂಗ್ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಅಲ್ಲದೇ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.