ಹೊಸ ವರ್ಷದ ಹಿನ್ನೆಲೆಯಲ್ಲಿ ಕೆಲವು ಯುವಕರ ಗುಂಪು ಭರ್ಜರಿಯಾಗಿ ಎಣ್ಣೆ ಪಾರ್ಟಿ ಮಾಡಿತ್ತು. ಆದರೆ, ಅವರನ್ನು ವಿದ್ಯಾರ್ಥಿಗಳು ರೇಗಿಸಿ ವಿದ್ಯಾರ್ಥಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಲ್ ಪಟ್ಟಣದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ. ಡಿ. 31ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಕುಡುಕರನ್ನು ರೇಗಿಸಿದ್ದಕ್ಕೆ ನಾಲ್ಕು ಜನರ ಕುಡುಕರು ವಿದ್ಯಾರ್ಥಿಗಳ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ.
ದೊಣ್ಣೆ, ಬ್ಯಾಟ್ ಗಳಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುಡಿದು ಹೋಗುತ್ತಿದ್ದ ವ್ಯಕ್ತಿಗಳನ್ನು ವಿದ್ಯಾರ್ಥಿಗಳು ರೇಗಿಸಿದೆ. ಆಗ ಕುಡುಕರು ವಿದ್ಯಾರ್ಥಿಗಳಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಆಗ ವಿದ್ಯಾರ್ಥಿಗಳೆಲ್ಲ ಇದನ್ನು ಪ್ರಶ್ನಿಸಲು ತೆರಳಿದ್ದಾರೆ. ಆ ಸಂದರ್ಭದಲ್ಲಿ ಕುಡುಕರು ತಮ್ಮ ಸ್ನೇಹಿತರನ್ನೆಲ್ಲ ಕರೆಯಿಸಿಕೊಂಡು ವಿದ್ಯಾರ್ಥಿಗಳನ್ನು ಬೆನ್ನಟ್ಟಿ, ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.
ವಿದ್ಯಾರ್ಥಿ ನಿಲಯದೊಳಗೆ ನುಗ್ಗಿ ದೊಣ್ಣೆ, ಬ್ಯಾಟ್ ಹಾಗೂ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕುಡುಕರು ಅಲ್ಲಿದ್ದ ವಸ್ತುಗಳನ್ನು ಕೂಡ ಹಾಳು ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನವೀದ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಮುಖ ಆರೋಪಿ ರಾಘವೇಂದ್ರ ಯಾನೆ ಬಾಬ ನಾಯ್ಕ, ನಂದನ್ ಜೈನ್ ಎಂಬ ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.








