ದೇಶಕಂಡ ಮಹಾನ್ ನಾಯಕ ಸುಭಾಷ್ ಚಂದ್ರ ಬೋಸ್ ಅವರ ಸಂಬಂಧಿ ಹಾಗೂ ರಾಜಕಾರಣಿ ಕೃಷ್ಣಾ ಬೋಸ್ ವಿಧಿವಶವರಾಗಿದ್ದಾರೆ.
89 ವರ್ಷದ ಮಾಜಿ ಸಂಸದೆ ಕೃಷ್ಣಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದೆ 2 ನೇ ಬಾರಿಗೆ ಪಾಶ್ವ್ರವಾಯು ಪೀಡಿತರಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಪುತ್ರ ಸುಮಂತ್ರ ತಿಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಇಬ್ಬರು ಪುತ್ರರು ಹಾಗೂ ಪುತ್ರಿಯನ್ನ ಅಗಲಿ ಇಹಲೋಕ ತ್ಯಜಿಸಿದ್ದಾರೆ.
ರಾಜಕೀಯವಾಗಿ ಗುರುತಿಸಿಕೊಂಡಿದ್ದ ಕೃಷ್ಣಾ ಬೋಸ್ ಅವರು ಮೊದಲಬಾರಿಗೆ 1996ರಲ್ಲಿ ಕಾಂಗ್ರೆಸ್‍ನಿಂದ ಪಶ್ಚಿಮ ಬಂಗಾಳದ ಜಾದವ್‍ಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಎರಡನೇ ಅವಧಿಗೂ ಅದೇ ಕ್ಷೇತ್ರದಿಂದ ಗೆದ್ದ ಕೃಷ್ಣಾ ಬೋಸ್, ಬಳಿಕ
1999ರಲ್ಲಿ ತೃಣಮೂಲ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಮೂರನೇ ಬಾರಿಗೆ ಸಂಸದರಾಗಿ ಚುನಾಯಿತರಾಗಿದ್ದರು. ಇದೇ ಸಂದರ್ಭದಲ್ಲಿ ನೇತಾಜಿ ರಿಸರ್ಚ್ ಬ್ಯೂರೋದ ಅಧ್ಯಕ್ಷರಾಗಿ ನೇಮಕಗೊಂಡು ಕಾರ್ಯ ನಿರ್ವಹಿಸಿದ್ದರು.
ಸುಭಾಷ್ ಚಂದ್ರ ಬೋಸ್ ಅವರ ಸೋದರ ಅಳಿಯ ಶಿಶಿರ್ ಕುಮಾರ್ ಅವರನ್ನು ವಿವಾಹವಾಗಿದ್ದ ಕೃಷ್ಣಾ ಅವರು, ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೇ ಶಿಕ್ಷಣ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಕೋಲ್ಕತ್ತದ ಸಿಟಿ ಕಾಲೇಜಿನಲ್ಲಿ 40 ವರ್ಷ ಅಧ್ಯಾಪಕರಾಗಿ, ನಂತರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದರು, ಇದರ ಜೊತೆ ಸಮಾಜಿಕ ಸೇವೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇಷ್ಟು ಮಾತ್ರವಲ್ಲದೇ ಕೃಷ್ಣಾ ಅವರು ಇಂಗ್ಲಿಷ್, ಬೆಂಗಾಳಿ ಭಾಷೆಯ ಜರ್ನಲ್‍ಗಳಿಗೆ ಅಂಕಣಕಾರರೂ ಆಗಿ ಸೇವೆಸಲ್ಲಿಸಿದ್ದಾರೆ.








