ಬೆಂಗಳೂರು : ರಾಜ್ಯ ಸರ್ಕಾರ ಕೋವಿಡ್ ಸಾಮಗ್ರಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಹಾಭಾರತದ ಉಲ್ಲೇಖ ಮಾಡಿ ವಾಗ್ದಾಳಿ ನಡೆಸಿದ್ದರು. ಈ ವಿಚಾರವಾಗಿ ಇಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಈಗ ಮಹಾಭಾರತ ಏಕೆ ತರಬೇಕು..? ದ್ವಾಪರಯುಗದಲ್ಲಿ ನಡೆದಿರುವುದನ್ನ ಹೀಗೇಕೆ ತರಬೇಕು..? ಕೌರವರಾಗಲು ಕೂಡ ಇವರು ಲಾಯಕ್ಕಿಲ್ಲ. ಪಾಂಡವರು ಅಂದಾಕ್ಷಣಾ ಇವರೇನೋ ಧರ್ಮರಾಯರೋ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಸಿದ್ದರಾಮಯ್ಯ ಅಷ್ಟೆ. ನಾನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಲ್ಲ. ಏನಾದ್ರೂ ಸತ್ಯ, ನ್ಯಾಯ, ನೀತಿ ಇದ್ದರೆ ಅದು ಮಹಾಭಾರತ ರಾಮಾಯಣದ ಪಾಠಗಳಿಂದ ಕಲಿಬೇಕಷ್ಟೆ. ನಾನು ಅಂಬೇಡ್ಕರ್, ನಾನು ಗಾಂಧಿ ಅಂತೆಲ್ಲ ಅಂದುಕೊಳ್ಳೋದಲ್ಲ. ಗಾಂಧಿ ಗಾಂಧಿಯೇ, ಅಂಬೇಡ್ಕರ್ ಅಂಬೇಡ್ಕರ್ ರೇ ಎಂದರು.
ಇದೇ ವೇಳೆ ತಮ್ಮ ಹಳೆ ಶಿಷ್ಯ, ಹಾಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಟೀಕೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ಅಧಿಕಾರ ಇದೆ ಅಂತ ಬಾಯಿಗೆ ಬಂದಂಗೆ ಮಾತಾಡಬಾರದು. ನಂಗೇ ಪಾಠ ಹೇಳಿಕೊಡೋದಾ, ಅಧಿಕಾರದ ಅಹಂನಿಂದ ಸುಧಾಕರ್ ಮಾತಾಡ್ತಿರೋದು. ಅಧಿಕಾರ ಬಂದ ಮೇಲೆ ಹೀಗೆಲ್ಲ ಮಾತಾಡ್ತಿದ್ದಾರೆ. ಅಪ್ರೂವ್ ಅಂದ್ರೇನೂ, ಸ್ಯಾಂಕ್ಷನ್ ಅಂದ್ರೇನೂ,ಎಕ್ಸ್ ಪೆಂಡಿಚರ್ ಅಂದ್ರೇನೂ ಎಲ್ಲ ಗೊತ್ತಿಲ್ಲ ನಂಗೆ. ಇವೆಲ್ಲ ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿಬಿಟ್ಟೆನಲ್ರಯ್ಯಾ? ಎಂದು ವ್ಯಂಗ್ಯವಾಡಿದ್ದಾರೆ.
ಮುಂದುವರಿದು ಸುಧಾಕರ್ ವಿರುದ್ಧ ಕಿಡಿಕಾರಿದ ಸಿದ್ದು, ಮಂಜೂರಾತಿ, ಪ್ರಸ್ತಾವನೆ, ಖರ್ಚು ಗೊತ್ತಿಲ್ಲದೆ ನಾನು ಅವನಿಗೆ ಟಿಕೆಟ್ ಕೊಡಿಸಿದ್ದು. ಅವನು ಮಂತ್ರಿ ಆಗಿದ್ದು ಯಾವಾಗ..?, ನಾನು ಮಂತ್ರಿ ಆಗಿದ್ದು ಯಾವಾಗ..?, ನಾನು ರಾಜ್ಯ ಸಚಿವ, ಕ್ಯಾಬಿನೆಟ್ ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದೆ. ನನಗೆ ಪ್ರಸ್ತಾವನೆ, ಮಂಜೂರಾತಿ, ಖರ್ಚು ಗೊತ್ತಿಲ್ಲದೆ 13 ಬಜೆಟ್ ಮಂಡಿಸಿದ್ದೇನೆ ಅಲ್ವಾ. ಉಪಕಾರ ಸ್ಮರಣೆ ಇಲ್ಲದೆ ಹೀಗೆ ಮಾತಾಡ್ತಿದ್ದಾರೆ, ಮಾತಾಡಲಿ ಎಂದು ಶಿಷ್ಯನ ವಿರುದ್ಧ ಗರಂ ಆದರು.