ಕಳ್ಳತನದ ಆರೋಪದಲ್ಲಿ ಅರೆಸ್ಟ್ ಆಗಿದ್ದ 17 ವರ್ಷದ ಬಾಲಕ ಜೈಲಿನಲ್ಲೇ ಆತ್ಮಹತ್ಯೆ
ಕಳ್ಳತನದ ಆರೋಪದಲ್ಲಿ ಬಂಧಿತನಾಗಿದ್ದ 17 ವರ್ಷದ ಅಪ್ರಾಪ್ತ ಬಾಲಕ ಮನನೊಂದು ಠಾಣೆಯಲ್ಲೇ ಆತ್ಮಹತ್ಯೆಗೆ ಶರಣಾಗಿರೋ ಘಟನೆಯು ಹರಿಯಾಣದ ಫತೇಹಾಬಾದ್ ನಲ್ಲಿ ನಡೆದಿದೆ.. ಭಾಟಿಯಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿನೋದ್ ಕುಮಾರ್, ಜನವರಿ 11ರಂದು ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದರು. ಆದರೆ ಮರುದಿನ ಹಿಂದಿರುಗಿ ನೋಡಿದಾಗ ಮನೆಯ ಬೀಗ ಹೊಡೆದು 3,000 ರೂಪಾಯಿ ಕಳ್ಳತನವಾಗಿರುವುದು ಕಂಡುಬಂತು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ನೆರೆಹೊರೆಯವರನ್ನು ವಿಚಾರಿಸಿದಾಗ ಬಾಲಕನ ಮೇಲೆ ಆರೋಪ ಕೇಳಿ ಬಂದಿದೆ. ಪೊಲೀಸರು ಐಪಿಸಿ ಸೆಕ್ಷನ್ 457 ಮತ್ತು 380ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಂತರ ಬಾಲಕನನ್ನು ಫತೇಹಾಬಾದ್ನಿಂ ದ ಬೋರ್ಸೆಲ್ ಜೈಲಿಗೆ ಗುರುವಾರ ಕರೆದೊಯ್ಯಲಾಗಿತ್ತು. ಕೊರೊನಾ ಕಾರಣಾಂತರದಿಂದ ಪ್ರತ್ಯೇಕ ಕೊಠಡಿಯಲ್ಲಿ ಬಾಲಕ ಇದ್ದನು. ಶನಿವಾರ ಜೈಲು ಸಿಬ್ಬಂದಿ ಬಾಲಕನಿಗೆ ಊಟ ನೀಡಲು ಹೋದ ವೇಳೆ ಬಾಲಕ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದೀಗ ಬಾಲಕನ ತಾಯಿ ಸುಮನ್ ಮತ್ತು ಸಹೋದರಿ ಮೋನು, ಫತೇಹಾಬಾದ್ ಪೊಲೀಸರು ಬಾಲಕನಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ.
ಬಾಲಕನಿಗೆ ಪೊಲೀಸರು ನಿರ್ದಯವಾಗಿ ಥಳಿಸಿದ್ದರಿಂದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.