ಸಂಸದೆ ಸುಮಲತಾ ಅವರದ್ದು ಚೀಪ್ ಪಾಪ್ಯುಲಾರಿಟಿ : ಡಿ.ಕೆ.ಶಿವಕುಮಾರ್
ಬೆಂಗಳೂರು : ಸಂಸದೆ ಸುಮಲತಾ ಅವರದ್ದು ಚೀಪ್ ಪಾಪ್ಯುಲಾರಿಟಿ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಮಲತಾ ಮತ್ತು ಜೆಡಿಎಸ್ ಗುದ್ದಾಟದಲ್ಲಿ ಹೆಚ್ ಡಿಕೆ ಪರ ಬ್ಯಾಟ್ ಬೀಸಿದ್ದಾರೆ.
ಸದ್ಯ ಸುಮಲತಾ ಮತ್ತು ಜೆಡಿಎಸ್ ಮಧ್ಯೆ ನಡೆಯುತ್ತಿರುವ ಗುದ್ದಾಟದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಡಿ.ಕೆ.ಶಿವಕುಮಾರ್, ನನಗೆ ಯಾವ ಗಣಿಗಾರಿಕೆ ವಿಚಾರವೂ ಗೊತ್ತಿಲ್ಲ. ನಾನು ಸ್ವಲ್ಪ ದಿನ ಮಂಡ್ಯ ಉಸ್ತುವಾರಿ ಮಂತ್ರಿ ಆಗಿದ್ದೆ. ಆಗ ಯಾರೂ ನನ್ನ ಬಳಿ ಬಂದು ಗಣಿಗಾರಿಕೆ ಸುದ್ದಿ ಮಾತಾಡಿರಲಿಲ್ಲ. ಎಲ್ಲೋ 10-15 ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರೋ ಗಣಿಗಾರಿಕೆಗೂ ಡ್ಯಾಂಗೂ ಸಂಬಂಧವಿಲ್ಲ. ಯಾವುದೇ ವ್ಯತ್ಯಾಸ ಆಗಲ್ಲ. ಗಣಿಗಾರಿಕೆ ಮಾಡಲು ಅನೇಕ ನಿಯಮ, ಲೆಕ್ಕಾಚಾರ ಇವೆ. ಇದನ್ನ ನೋಡಿಕೊಳ್ಳಲು ಗಣಿ ಇಲಾಖೆ ಇದೆ. ಇದಕ್ಕಾಗಿ ನೂರಾರು ಜನ ಎಂಜಿನಿಯರ್ ಗಳನ್ನ ನೇಮಕ ಮಾಡಿದ್ದು, ಅವರು ನೋಡಿಕೊಳ್ತಾರೆ ಎಂದರು.
ಇನ್ನು ಕೆಆರ್ ಎಸ್ ಬಿರುಕು ಹೇಳಿಕೆ ಬಗ್ಗೆ ಮಾತನಾಡಿ, ಬಿರುಕು ಬಿಟ್ಟಿದೆ ಅಂತ ಆತಂಕ ಹುಟ್ಟಿಸೋ ಚೀಪ್ ಪಾಪ್ಯುಲರಿಟಿ ಬಗ್ಗೆ ಮಾತಾಡೋಕೆ ನನಗೆ ಇಷ್ಟ ಇಲ್ಲ. ಇದು ಅತ್ಯಂತ ಸೂಕ್ಷ್ಮವಾದ ವಿಚಾರ. ಈ ದೇಶ, ಈ ರಾಜ್ಯದ ಆಸ್ತಿ. ಆಸ್ತಿ ಬಗ್ಗೆ ನಾವು ಜವಾಬ್ದಾರಿ ಸ್ಥಾನದಲ್ಲಿ ಇರೋರು ಎಚ್ಚರಿಕೆಯಿಂದ ಮಾತಾಡಬೇಕು ಎಂದು ಹೇಳಿದರು.