`ಕೈ’-`ದಳ’ ಕೋಟೆಯಲ್ಲಿ ಅರಳಿದ ಕಮಲ : ಬಿಜೆಪಿಗೆ ಮೇಯರ್ ಪಟ್ಟ
ಮೈಸೂರು : ಕಾಂಗ್ರೆಸ್ – ಜೆಡಿಎಸ್ ಕೋಟೆಯಂದೇ ಗುರುತಿಸಿಕೊಂಡಿರುವ ಮೈಸೂರಿನಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ. ಮೈಸೂರು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೇಯರ್ ಕುರ್ಚಿ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ – ಜೆಡಿಎಸ್ ಒಳಜಗಳದಲ್ಲಿ ಬಿಜೆಪಿಯ ಸುನಂದ್ರಾ ಪಾಲನೇತ್ರಾ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಸುನಂದಾ ಅವರು ಯಡಿಯೂರಪ್ಪ ಅವರ ಸಂಬಂಧಿಯಾಗಿದ್ದಾರೆ.
ಮೈಸೂರು ಪಾಲಿಕೆಯ 23ನೇ ಅವಧಿಗೆ 35ನೇ ಮೇಯರ್ ಆಗಿ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ. ಸದ್ಯ ಬಿಜೆಪಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಅಂದಹಾಗೆ ಮೈಸೂರು ಮೇಯರ್ ಚುನಾವಣೆ ಭಾರಿ ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್ ಜೆಡಿಎಸ್ ಜಗಳದ ಮಧ್ಯೆ ಬಿಜೆಪಿ ಅದೃಷ್ಠ ಪರೀಕ್ಷೆಗೆ ಇಳಿದಿತ್ತು. ಮೇಯರ್ ಚುನಾವಣೆಗಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದ್ರೆ ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲ ನೀಡದ ಹಿನ್ನೆಲೆಯಲ್ಲಿ ಜೆಡಿಎಸ್ ಬಿಜೆಪಿಗೆ ಬಲ ತುಂಬಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಬಿಜೆಪಿಗೆ ಮೇಯರ್ ಪಟ್ಟ ದೊರಕಿದೆ.