ಸುನೀಲ್ ಗವಾಸ್ಕರ್.. ಭಾರತ ಕ್ರಿಕೆಟ್‍ನ ಮಾಣಿಕ್ಯ. ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬರುವುದಕ್ಕಿಂತ ಮುನ್ನ ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸುತ್ತಿದ್ದ ಹೆಸರು ಸುನೀಲ್ ಗವಾಸ್ಕರ್. ಹೌದು, ಟೆಸ್ಟ್ ಕ್ರಿಕೆಟ್ ನಲ್ಲಿ 10 ಸಾವಿರ ರನ್ ದಾಖಲಿಸಿದ್ದ ಗವಾಸ್ಕರ್ ಆಟಕ್ಕೆ ಮನ ಸೋಲದವರಿಲ್ಲ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್ ನಲ್ಲಿ ಗವಾಸ್ಕರ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತು.
ಹೌದು, ಭಾರತೀಯ ಗವಾಸ್ಕರ್ ಕಾಲವೂ ಮುಗಿದು ಹೋಗಿದೆ. ಸಚಿನ್ ಕಾಲವೂ ಮುಗಿದಿದೆ. ಧೋನಿ ಕಾಲವೂ ಮುಗಿಯುತ್ತಿದೆ. ಇದೀಗ ವಿರಾಟನ ಕಾಲ. ಹಾಗಂತ ಹಳೆಯ ಕಾಲದ ಅವಿಸ್ಮರಣೀಯ ಘಟನೆಗಳು, ರೋಚಕ ಪಂದ್ಯಗಳು, ಅದ್ಭುತವಾದ ಇನಿಂಗ್ಸ್‍ಗಳನ್ನು ಮರೆಯೋಕೆ ಆಗುತ್ತಾ ? ಖಂಡಿತವಾಗಿಯೂ ಆಗಲ್ಲ. ಕಾಲಕ್ಕೆ ತಕ್ಕಂತೆ ಕ್ರಿಕೆಟ್ ಬದಲಾದ್ರೂ ಹಳೆಯ ಕೆಲವೊಂದು ಕ್ರಿಕೆಟ್ ಪಂದ್ಯಗಳು ಇಂದೂ ಕಣ್ಣಿಗೆ ಕಟ್ಟುವಂತಿದೆ. ಇತಿಹಾಸ ಇತಿಹಾಸವಾದ್ರೂ ಅದು ಸದಾ ನೆನಪಿನಲ್ಲಿ ಉಳಿಯುತ್ತವೆ.
ಇದೀಗ ಕೊರೋನಾ ವೈರಸ್‍ನಿಂದಾಗಿ ಎಲ್ಲಾ ಕ್ರಿಕೆಟಿಗರು ಮನೆಯಲ್ಲೇ ಇದ್ದಾರೆ. ಹೀಗಾಗಿ ತಮ್ಮ ಕ್ರಿಕೆಟ್ ಬದುಕಿನ ಕೆಲವೊಂದು ಸ್ವಾರಸ್ಯಕರವಾದ, ಅವಿಸ್ಮರಣೀಯ ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅದಕ್ಕೆ ಸುನೀಲ್ ಗವಾಸ್ಕರ್ ಸರದಿ. ಸುನೀಲ್ ಗವಾಸ್ಕರ್ ಕೂಡ ತಮ್ಮ ಹಳೆಯ ಪಂದ್ಯವೊಂದರಲ್ಲಿ ಆಗಿರುವಂತಹ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಅಂದ ಹಾಗೇ ಸುನೀಲ್ ಗವಾಸ್ಕರ್ ಭಾರತ ತಂಡಕ್ಕೆ ಆಯ್ಕೆಯಾಗಲು ಕಾರಣ ಏನು ಗೊತ್ತಾ ? ಅದೊಂದು ತ್ರಿಶತಕ. ಆ ತ್ರಿಶತಕದಿಂದ ಭಾರತ ತಂಡಕ್ಕೆ ಆಯ್ಕೆಯಾದ್ರು. ಆದ್ರೆ ಮುಂಬೈ ತಂಡದಿಂದ ಅವಕಾಶವನ್ನು ಕೂಡ ಕಳೆದುಕೊಂಡಿದ್ದರು. ಗವಾಸ್ಕರ್ ಹೇಳುವಂತೆ… ಶ್ರೀಲಂಕಾದಲ್ಲಿ ಅಂತರ ವಿಶ್ವ ವಿದ್ಯಾನಿಲಯ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಆ ಪಂದ್ಯದಲ್ಲಿ ನಾನು ತ್ರಿಶತಕ ಸಿಡಿಸಿದ್ದೆ. ಹೀಗಾಗಿ ನಾನು ಭಾರತ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಯ್ತು. ಆದ್ರೆ ಇದೇ ವೇಳೆ ನಾನು ಮುಂಬೈ ರಣಜಿ ತಂಡದಿಂದ ಹೊರಗುಳಿಯಬೇಕಾಯ್ತು. ಯಾಕಂದ್ರೆ ಹಿಂದಿನ ಪಂದ್ಯದಲ್ಲಿ ಒಬ್ಬ ಚೆನ್ನಾಗಿ ರನ್ ಗಳಿಸಿದ್ದ. ಹಾಗಾಗಿ ನಾನು 12ನೇ ಆಟಗಾರನಾಗಿ ಉಳಿಯಬೇಕಾಯ್ತು ಎಂಬುದನ್ನು ಗವಾಸ್ಕರ್ ಈ ವೇಳೆ ನೆನಪಿಸಿಕೊಂಡ್ರು.
ಆ ಪಂದ್ಯದ ಬೆಳಗ್ಗೆ ಎಲ್ಲರೂ ಅಭ್ಯಾಸದಲ್ಲಿ ನಿರತರಾಗಿದ್ದರು. ನಾನು ತಂಡದ 12ನೇ ಆಟಗಾರ. ಆಗ ನಮ್ಮ ತಂಡದ ನಾಯಕ ಅಜಿತ್ ವಾಡೇಕರ್. ಅಭ್ಯಾಸದ ವೇಳೆ ಅಜಿತ್ ವಾಡೇಕರ್ ಗಾಯಗೊಂಡಿದ್ದರು. ಇದು ನಡೆದಿರುವುದು ಟಾಸ್‍ಗೆ ಮುನ್ನ. ಹೀಗಾಗಿ ನಾನು 11ರ ಬಳಗವನ್ನು ಸೇರಿಕೊಂಡೆ. ಆ ದಿನಗಳಲ್ಲಿ ನಮ್ಮ ಕಿಟ್ ಬ್ಯಾಗ್‍ಗಳು ತುಂಬಾ ಸಣ್ಣದಾಗಿರುತ್ತಿದ್ದವು. (ಈಗ ಎಲ್ಲಾ ದೊಡ್ಡ ದೊಡ್ಡ ಕಿಟ್ ಬ್ಯಾಗ್‍ಗಳಿರುತ್ತಿದ್ದವು.) ನಾನು ಬ್ಯಾಗ್ ತೆಗೆದು ನೋಡಿದಾಗ ಪ್ಯಾಡ್ ಅನ್ನು ಮನೆಯಲ್ಲಿ ಮರೆತುಬಂದಿದ್ದೆ. ಏನು ಮಾಡೋದು. ನನ್ನ ಅಮ್ಮನಿಗೆ ಕರೆ ಮಾಡಿ ನನ್ನ ಪ್ಯಾಡ್‍ಗಳನ್ನು ತೆಗೆದುಕೊಂಡು ಬನ್ನಿ ಅಂತ ಹೇಳಿದ್ದೆ. ಆಗ ನಾವು ಮೊದಲು ಬ್ಯಾಟಿಂಗ್ ಮಾಡಬೇಕೋ ಬೌಲಿಂಗ್ ಮಾಡಬೇಕೋ ಗೊತ್ತಿರಲಿಲ್ಲ. ಟಾಸ್ ಕೂಡ ಆಗಿರಲಿಲ್ಲ. ಟಾಸ್ ಆದಾಗ ನಾವು ಮೊದಲು ಬ್ಯಾಟಿಂಗ್ ಮಾಡಬೇಕಿತ್ತು. ಆಗ ನಾನು ಅಜಿತ್ ಅವರ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಮಾಡಿದ್ದೆ. ಅಜಿತ್ ವಾಡೇಕರ್ ಎಡಗೈ ಬ್ಯಾಟ್ಸ್‍ಮೆನ್ ಆಗಿದ್ದರು. ಹೀಗಾಗಿ ನನಗೆ ಅವರ ಪ್ಯಾಡ್ ಸರಿ ಹೊಂದುತ್ತಿರಲಿಲ್ಲ. ಆದ್ರೂ ಆ ಪಂದ್ಯದಲ್ಲಿ ನಾನು ಶತಕ ದಾಖಲಿಸಿದ್ದೆ ಎಂದು ಸುನೀಲ್ ಗವಾಸ್ಕರ್ ತನ್ನ ಹಳೆಯ ಪಂದ್ಯದ ಘಟನೆಯೊಂದನ್ನು ಸ್ಮರಿಸಿಕೊಂಡ್ರು.








