ಇಂಜಮಮ್ ಉಲ್ ಹಕ್‍ಗೆ ಸುನೀಲ್ ಗವಾಸ್ಕರ್ ನೀಡಿದ್ದ ಸಲಹೆ ಏನು ?
ಇಂಜಮಮ್ ಉಲ್ ಹಕ್.. ಪಾಕಿಸ್ತಾನ ಕ್ರಿಕೆಟ್‍ನ ಮಾಜಿ ನಾಯಕ. ವಿಶ್ವ ಕ್ರಿಕೆಟ್‍ನ ಶ್ರೇಷ್ಠ ಬ್ಯಾಟ್ಸ್ ಮೆನ್‍ಗಳಲ್ಲಿ ಒಬ್ಬರಾಗಿದ್ದಾರೆ. ಅದ್ಭುತ ಆಟದ ಮೂಲಕವೇ ಗಮನ ಸೆಳೆದಿದ್ದ ಇಂಜಿ ತನ್ನ ಕ್ರಿಕೆಟ್ ಬದುಕಿನಲ್ಲಿ ಕೆಲಸವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮುಖ್ಯವಾಗಿ ಶಾರ್ಟ್ ಪಿಚ್ ಎಸೆತಗಳು. ಶಾರ್ಟ್ ಪಿಚ್ ಎಸೆತಗಳು ಇಂಜಿಯವರ ಬ್ಯಾಟಿಂಗ್‍ಗೆ ತುಂಬಾನೇ ತೊಂದರೆ ಕೊಡುತ್ತಿದ್ದವು. ಹೀಗೆ ಸಮಸ್ಯೆ ಎದುರಿಸುತ್ತಿದ್ದ ಇಂಜಮಮ್ ಉಲ್ ಹಕ್ ಕೊನೆಗೆ ಮೊರೆ ಹೋಗಿದ್ದು ಭಾರತ ಕ್ರಿಕೆಟ್ ನ ದಂತ ಕಥೆ ಸುನೀಲ್ ಗವಾಸ್ಕರ್
ಭಾರತ ಕ್ರಿಕೆಟ್ ತಂಡದ ಆರಂಭಿಕ ಹಾಗೂ ವಿಶ್ವದ ಶ್ರೇಷ್ಠ ಆಟಗಾರ ಸುನೀಲ್ ಗವಾಸ್ಕರ್ ನೀಡಿರುವ ಆ ಒಂದು ಸಲಹೆಯಿಂದ ಮುಂದೆ ಇಂಜಿ ಕ್ರಿಕೆಟ್ ಬದುಕು ಮುಗಿಯುವ ತನಕ ಶಾರ್ಟ್ ಪಿಚ್ ಎಸೆತಗಳಿಗೆ ಹೆದರಲಿಲ್ಲ. ಆ ಸಮಸ್ಯೆಯೇ ಅವರಿಗೆ ಆಗಲಿಲ್ಲ. ಹಾಗಿದ್ರೆ ಸುನೀಲ್ ಗವಾಸ್ಕರ್ ನೀಡಿರುವ ಸಲಹೆ ಏನು ಎಂಬುದನ್ನು ಸ್ವತಃ ಇಂಜಮಮ್ ಉಲ್ ಹಕ್ ಹೇಳಿದ್ದಾರೆ.
1992ರ ವಿಶ್ವಕಪ್ ನಲ್ಲಿ ನಾನು ಅದ್ಭುತ ಪ್ರದರ್ಶನ ನೀಡಿದ್ದೆ. ವಿಶ್ವಕಪ್ ಟೂರ್ನಿಯ ಯಶಸ್ಸಿನ ನಂತರ ಪಾಕ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆದ್ರೆ ಇಂಗ್ಲೆಂಡ್ ಪಿಚ್ ನಲ್ಲಿ ಹೇಗೆ ಆಡಬೇಕು ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ಮುಖ್ಯವಾಗಿ ನಾನು ಶಾರ್ಟ್ ಪಿಚ್ ಎಸೆತಗಳಿಗೆ ದಂಗಾಗುತ್ತಿದೆ. ಹೀಗಾಗಿ ಏನು ಮಾಡಬೇಕು ಅಂತನೇ ಗೊತ್ತಾಗುತ್ತಿರಲಿಲ್ಲ. ಇದೇ ವೇಳೆ ಸುನೀಲ್ ಗವಾಸ್ಕರ್ ಅವರು ಇಂಗ್ಲೆಂಡ್ ನಲ್ಲಿ ಚಾರಿಟಿ ಪಂದ್ಯವೊಂದನ್ನು ಆಡಲು ಬಂದಿದ್ದರು. ಆ ಪಂದ್ಯದಲ್ಲಿ ನಾನು ಸಹ ಆಡಿದ್ದೆ. ಆಗ ಸುನೀಲ್ ಭಾಯ್, ನಾನು ಶಾರ್ಟ್‍ಪಿಚ್ ಎಸೆತಗಳು ನನಗೆ ತೊಂದರೆಯನ್ನುಂಟು ಮಾಡುತ್ತಿವೆ. ಇದಕ್ಕೆ ಏನು ಪರಿಹಾರ ಅಂತ ಕೇಳಿದ್ದೆ. ಆಗ ಸುನೀಲ್ ಗವಾಸ್ಕರ್ ಒಂದು ಸಣ್ಣ ಸಲಹೆ ನೀಡಿದ್ದರು. ಇದು ನನ್ನ ಮುಂದಿನ ಕ್ರಿಕೆಟ್ ಬದುಕಿನುದ್ದಕ್ಕೂ ವರ್ಕ್‍ಔಟ್ ಆಯ್ತು. ಮುಂದೆ ಎಂದಿಗೂ ನನಗೆ ಶಾರ್ಟ್ ಪಿಚ್ ಎಸೆತಗಳು ಸಮಸ್ಯೆಯೇ ಆಗಿರಲಿಲ್ಲ ಅಂತ ಹೇಳ್ತಾರೆ ಇಂಜಮಮ್ ಉಲ್ ಹಕ್.
ಅಷ್ಟಕ್ಕೂ ಸುನೀಲ್ ಗವಾಸ್ಕರ್ ಹೇಳಿದ್ದು ಇಷ್ಟೇ… ನೀನು ಎಂದಿಗೂ ಅದು ಶಾರ್ಟ್ ಬಾಲ್ ಎಸೆತ ಅಥವಾ ಬೌನ್ಸರ್ ಎಸೆತ ಅಂತ ತಿಳಿಯಬೇಡ. ನೀನು ಆ ಕ್ಷಣದ ಬಗ್ಗೆ ಯೋಚಿಸು ಅಷ್ಟೇ. ಬೌಲರ್‍ನ ಎಸೆತವನ್ನು ಕ್ಷಣ ಮಾತ್ರದಲ್ಲೇ ಅರ್ಥಮಾಡಿಕೊಳ್ಳಬೇಕು. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು ಅನ್ನೋ ಸಲಹೆಯನ್ನು ಸುನೀಲ್ ಗವಾಸ್ಕರ್ ನೀಡಿದ್ದರು ಎಂದು ಇಂಜಮಮ್ ಉಲ್ ಹಕ್ ಹೇಳಿದ್ದಾರೆ.
ಗವಾಸ್ಕರ್ ಸಲಹೆಯಂತೆ ನೆಟ್ಸ್‍ನಲ್ಲೂ ಅದೇ ರೀತಿ ಯೋಚನೆ ಮಾಡಿಕೊಂಡು ನಾನು ಅಭ್ಯಾಸ ನಡೆಸಿದ್ದೆ. ಮಾನಸಿಕವಾಗಿಯೂ ಗಟ್ಟಿಯಾದೆ. ನನ್ನ ಬಳಿ ನಾನೇ ಮಾತನಾಡಿಕೊಂಡೆ. ಅವು ಶಾರ್ಟ್ ಬಾಲ್ ಎಸೆತಗಳಲ್ಲ ಅಂತ. ಈ ನನ್ನ ವೀಕ್‍ನೆಸ್ ಅನ್ನು ಗವಾಸ್ಕರ್ ಸಲಹೆಯಂತೆ ನಾನೇ ದೂರ ಮಾಡಿಕೊಂಡೆ. ಮುಂದೆ ಎಂದಿಗೂ ನನಗೆ ಶಾರ್ಟ್ ಬಾಲ್ ಎಸೆತಗಳು ಸಮಸ್ಯೆಯಾಗಲಿಲ್ಲ ಎಂದು ಇಂಜಿ ತಿಳಿಸಿದ್ರು.
ಇಂಜಮಮ್ ಉಲ್ ಹಕ್ ಅವರು 120 ಟೆಸ್ಟ್ ಪಂದ್ಯಗಳಲ್ಲಿ 8830 ರನ್ ಹಾಗೂ 378 ಏಕದಿನ ಪಂದ್ಯಗಳಲ್ಲಿ 11739 ರನ್ ಪೇರಿಸಿದ್ದಾರೆ. ಅಂದ ಹಾಗೇ ಇಂಜಮಮ್ ಉಲ್ ಹಕ್ ಅವರು ಸುನೀಲ್ ಗವಾಸ್ಕರ್ ಅವರ 71ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ರು.








