ಬಾಲಿವುಡ್ ನಟ ಸುನೀಲ್ ಶೆಟ್ಟಿ ಅಪಾರ್ಟ್ಮೆಂಟ್ ಸೀಲ್ ಮಾಡಿದ ಬಿಎಂಸಿ
ಮುಂಬೈ : ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮುಂಬೈನ ಅಪಾರ್ಟ್ ಮೆಂಟ್ ಕಟ್ಟಡವನ್ನು ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ (ಬಿಎಂಸಿ) ಸೀಲ್ ಮಾಡಿದೆ. ಕಟ್ಟಡದ ಕೆಲವು ನಿವಾಸಿಗಳಲ್ಲಿ ಕೋವಿಡ್ 19 ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಪೃಥ್ವಿ ಅಪಾರ್ಟ್ಮೆಂಟ್ಸ್ ಕಟ್ಟಡವನ್ನು ಸೀಲ್ ಮಾಡಲಾಗಿದೆ. ಇನ್ನೂ ಇದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ನಟ ಸುನಿಲ್ ಶೆಟ್ಟಿ ಅವರ ಇಡೀ ಕುಟುಂಬ ಸುರಕ್ಷಿತವಾಗಿದೆ ಎಂದು ಬಿಎಂಸಿ ಸಹಾಯಕ ಆಯುಕ್ತ ಪ್ರಶಾಂತ್ ಗಾಯಕ್ ವಾಡ್ ತಿಳಿಸಿದ್ದಾರೆ.
ಯಾವುದೇ ವಸತಿ ಸಮುಚ್ಛಯದಲ್ಲಿ ಐದಕ್ಕಿಂತ ಹೆಚ್ಚು ಕರೊನಾ ಕೇಸುಗಳು ವರದಿಯಾದಲ್ಲಿ ಅದನ್ನು ಸೀಲ್ ಮಾಡಿ, ಮೈಕ್ರೋಕಂಟೈನ್ಮೆಂಟ್ ಜೋನ್ ಆಗಿ ಘೋಷಿಸಲಾಗುತ್ತದೆ. ಬಿಎಂಸಿ ಪ್ರೋಟೋಕಾಲ್ ಪ್ರಕಾರ ಸೊಸೈಟಿಯ ಗೇಟಿನ ಮೇಲೆ ಈ ಬಗ್ಗೆ ಫಲಕ ಹಾಕಿ, ಹೊರಗಿನವರಿಗೆ ಪ್ರವೇಶ ನಿರಾಕರಿಸಬೇಕಾಗಿರುತ್ತದೆ. ಅಂತೆಯೇ ಬಿಎಂಸಿ ತನ್ನ ಕರ್ತವ್ಯ ನಿರ್ವಹಿಸಿದ್ದು, ಐದಕ್ಕಿಂತ ಹೆಚ್ಚು ಪ್ರಕರಣಗಳು ಕಂಡು ಬಂದ ಹಿನ್ನೆಲೆ ಕಟ್ಟಡವನ್ನ ಸೀಲ್ ಡೌನ್ ಮಾಡಿ ಹೊರಗಿನಿಂದ ಬರುವವರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.








