ಮದ್ಯದ ದೊರೆ ವಿಜಯ್ ಮಲ್ಯಗೆ 4 ತಿಂಗಳು ಜೈಲು ಶಿಕ್ಷೆ…
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪರಾರಿಯಾಗಿರುವ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸುಪ್ರೀಂ ಕೋರ್ಟ್ ನಾಲ್ಕು ತಿಂಗಳ ಶಿಕ್ಷೆ, ಎರಡು ಸಾವಿರ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ ದಂಡ ಪಾವತಿಸದ ಕಾರಣ ಎರಡು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆಯನ್ನೂ ನ್ಯಾಯಾಲಯ ವಿಧಿಸಿದೆ.
ವಿದೇಶಕ್ಕೆ ವರ್ಗಾವಣೆಯಾಗಿರುವ 40 ಮಿಲಿಯನ್ ಡಾಲರ್ ಅಂದರೆ ಸುಮಾರು 317 ಕೋಟಿ ರುಪಾಯಿಗಳನ್ನ ಹಣವನ್ನು 4 ವಾರಗಳಲ್ಲಿ 8% ಬಡ್ಡಿಯಂತೆ ಹಿಂತಿರುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಳಿದೆ. ಇಲ್ಲದಿದ್ದರೆ ಮಲ್ಯ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ $40 ಮಿಲಿಯನ್ ಹಣವನ್ನು ವರ್ಗಾಯಿಸಿದ್ದಕ್ಕಾಗಿ ಮಲ್ಯ ಅವರನ್ನು ನ್ಯಾಯಾಲಯದ ನಿಂದನೆ ಆರೋಪದಲ್ಲಿ ಸುಪ್ರೀಂ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ. 2017 ರಲ್ಲಿ ಆಸ್ತಿ ವಿವರಗಳನ್ನು ನೀಡದ ಕಾರಣ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ ಆರೋಪದಲ್ಲಿ ಮಲ್ಯ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.
ನ್ಯಾಯಾಲಯದ ಈ ತೀರ್ಪಿನ ಕುರಿತು ಮಲ್ಯ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಫೆಬ್ರವರಿ 10 ರಂದು, ಸುಪ್ರೀಂ ಕೋರ್ಟ್ ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ಎರಡು ವಾರಗಳ ಅಂತಿಮ ಅವಕಾಶವನ್ನು ನೀಡಿತ್ತು. ಮಲ್ಯ ಮೇಲಿನ ಶಿಕ್ಷೆಯ ತೀರ್ಪನ್ನು ಮಾರ್ಚ್ 10 ರಂದು ನ್ಯಾಯಾಲಯ ಕಾಯ್ದಿರಿಸಿತ್ತು.
9,000 ಕೋಟಿಗೂ ಅಧಿಕ ಸಾಲವನ್ನು ಮರುಪಾವತಿ ಮಾಡಿಲ್ಲ ಎಂಬ ಆರೋಪ ಮದ್ಯದ ದೊರೆ ಮಲ್ಯ ಮೇಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನೇತೃತ್ವದ ಬ್ಯಾಂಕ್ಗಳ ಒಕ್ಕೂಟವು ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಮಲ್ಯ ಮಾರ್ಚ್ 2016 ರಿಂದ ಯುಕೆಯಲ್ಲಿ ವಾಸವಿದ್ದಾರೆ.