ಧೋನಿ ಮತ್ತು ರೈನಾ ನಡುವಿನ ನಂಟು…. ಅಂಟಿನ ಉಂಡೆ ಕರದಂಟುನಂತೆ ಸಿಹಿಯಾಗಿದೆ..!
ಬಾಸ್ಕೆಟ್ ಬಾಲ್ ನಲ್ಲಿ ಮೈಕೆಲ್ ಜೋರ್ಡಾನ್ಗೆ ಸ್ಕಾಟಿ ಪಿಪ್ಪನ್ ಅಗತ್ಯವಿತ್ತು. ಹಾಗೇ ಫುಟ್ಬಾಲ್ ನಲ್ಲಿ ಲಿಯೋನಾಲ್ ಮೆಸ್ಸಿಗೆ ಆಂಡ್ರೆಸ್ ಇನಿಯೆಸ್ಟಾನ ಅವಶ್ಯಕತೆ ಇತ್ತು. ಅದೇ ರೀತಿ ಧೋನಿಗೆ ಸುರೇಶ್ ರೈನಾ ಮೇಲೆ ಅಪಾರ ನಂಬಿಕೆ ಇತ್ತು.
ಹೌದು, ಧೋನಿ ಮತ್ತು ರೈನಾ ನಡುವಿನ ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಂಬಿಕೆ- ವಿಶ್ವಾಸ-ಪ್ರೀತಿಯ ಬಾಂಧವ್ಯ ಅವರನ್ನು ಗಟ್ಟಿಗೊಳಿಸಿತ್ತು. ಮೈದಾನದೊಳಗೆ ಹಾಗೂ ಮೈದಾನ ಹೊರಗಡೆ ತುಂಬಾನೇ ಅನೋನ್ಯವಾಗಿದ್ದರು. ಆದ್ರೆ ಇವರಿಬ್ಬರ ನಡುವಿನ ಸ್ನೇಹದಲ್ಲಿ ವೈಯಕ್ತಿಕ ವಿಚಾರವೇ ಬೇರೆಯಾಗಿತ್ತು. ವೃತ್ತಿಪರತೆಯೇ ಬೇರೆಯೇದ್ದೇ ಆಗಿತ್ತು. ಕೆಲವೊಂದು ಬಾರಿ ಅನ್ನಿಸಿದ್ದು ಇದೆ. ಧೋನಿ ಸುರೇಶ್ ರೈನಾಗೆ ಹೆಚ್ಚಿನ ಅವಕಾಶ ನೀಡ್ತಾರೆ ಅಂತ. ಆದ್ರೆ ಅದು ಧೋನಿಯ ಸ್ವಭಾವ.
ಒಬ್ಬ ಆಟಗಾರ ತಪ್ಪು ಮಾಡಲಿ, ವೈಫಲ್ಯ ಅನುಭವಿಸಲಿ ಅವರಿಗೆ ಚಾನ್ಸ್ ಕೊಡ್ತಾರೆ. ಅದನ್ನು ತಿದ್ದಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ. ಸಲಹೆ -ಮಾರ್ಗದರ್ಶನ ನೀಡುವುದು ಧೋನಿಯ ಧರ್ಮವಾಗಿತ್ತು. ಆದ್ರೆ ಉಪಯೋಗಿಸಿಕೊಳ್ಳುವುದು ಆಟಗಾರರ ಕರ್ಮವಾಗಿತ್ತು. ಇನ್ನೊಂದು ವಿಚಾರ ಅಂದ್ರೆ ಧೋನಿ ಒಬ್ಬ ಆಟಗಾರನ ಮೇಲೆ ನಂಬಿಕೆ ಇಟ್ಟುಕೊಂಡ್ರೆ ಅದನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಆದ್ರೆ ನಂಬಿಕೆ ಕಳೆದುಕೊಂಡ್ರೆ ಆ ದೇವರು ಬಂದ್ರೂ ಧೋನಿ ಅವಕಾಶ ನೀಡುವುದಿಲ್ಲ. ಇದು ಧೋನಿಯ ಗುಣ
ಸುರೇಶ್ ರೈನಾಗಿಂತ ಧೋನಿ ಐದು ವರ್ಷ ದೊಡ್ಡವರು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಯಾದ ಒಂದು ವರ್ಷದ ನಂತರ ಸುರೇಶ್ ರೈನಾ ಟೀಮ್ ಇಂಡಿಯಾಗೆ ಪ್ರವೇಶ ಮಾಡಿದ್ದರು. ಇಬ್ಬರು ಕೂಡ ಸೊನ್ನೆಯಿಂದಲೇ ತನ್ನ ಏಕದಿನ ಕ್ರಿಕೆಟ್ ರನ್ ಖಾತೆಯನ್ನು ಶುರು ಮಾಡಿದ್ದರು. ಇದೀಗ ಜೊತೆಯಾಗಿ ಅಂದ್ರೆ ಕೆಲವೇ ನಿಮಿಷಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ಧೋನಿ ಮತ್ತು ಸುರೇಶ್ ರೈನಾ ನಡುವಿನ ನಂಟು ಅಂಟಿನ ಉಂಡೆ ಕರದಂಟುನಂತೆ ಸಿಹಿಯಾಗಿದೆ. ಧೋನಿ ಅಂದ್ರೆ ರೈನಾಗೆ ಅಣ್ಣನ ಸಮಾನ. ಪ್ರೀತಿ, ವಿಶ್ವಾಸ, ನಂಬಿಕೆ ಒಡನಾಡಿಗಿಂತಲೂ ಅವರಿಬ್ಬರ ನಡುವಿನ ಸ್ನೇಹ ಬೇರಿನಷ್ಟೇ ಗಟ್ಟಿಯಾಗಿ ಬೆಳೆದುಕೊಂಡಿದೆ.
ನಿಮಗೆ ನೆನಪಿರಬಹುದು.. ಧೋನಿ 2014ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದಾಗ ರೈನಾ ಕಣ್ಣೀರು ಹಾಕಿದ್ರು. ಹಾಗೇ ಧೋನಿಗೂ ಸುರೇಶ್ ರೈನಾ ಮೇಲೆ ಅಪಾರವಾದ ವಿಶ್ವಾಸವಿತ್ತು. ಅದಕ್ಕಿಂತ ಹೆಚ್ಚಾಗಿ ರೈನಾ ಅವರ ಪ್ರತಿಭೆಗೆ ಧೋನಿ ಮನ್ನಣೆ ನೀಡುತ್ತಿದ್ದರು. ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ಗೂ ಸಿದ್ದವಾಗುತ್ತಿದ್ದರು. ಅಗತ್ಯ ಬಿದ್ದಾಗ ಬೌಲಿಂಗ್ ಮಾಡಿ ತಂಡಕ್ಕೆ ತಿರುವು ಕೊಡುತ್ತಿದ್ದರು. ಇನ್ನು ಫೀಲ್ಡಿಂಗ್ ನಲ್ಲಿ ಹೇಳುವುದೇ ಬೇಡ. ರೈನಾ ಫೀಲ್ಡಿಂಗ್ಗೆ ಫೀಲ್ಡಿಂಗ್ ಮಾಂತ್ರಿಕ ಜಾಂಟಿ ರೋಡ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸುಮಾರು ಒಂದು ಸಾವಿರಕ್ಕೂ ಅಧಿಕ ರನ್ ಗಳನ್ನು ತನ್ನ ಚತುರ ಫೀಲ್ಡಿಂಗ್ ಮೂಲಕ ಕಟ್ಟಿ ಹಾಕಿದ್ದರು ಸುರೇಶ್ ರೈನಾ.
ಆದ್ರೆ ಧೋನಿಗೆ ಸಿಕ್ಕಿರುವಷ್ಟು ಅದೃಷ್ಟ, ಯಶಸ್ಸು ಸುರೇಶ್ ರೈನಾಗೆ ಸಿಗಲಿಲ್ಲ. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಅದೆಷ್ಟೋ ಬಾರಿ ಬೇರೆ ಆಟಗಾರರು ಹೀರೋಗಳಾಗುತ್ತಿದ್ದರು. ಟೀಮ್ ಇಂಡಿಯಾದಲ್ಲಿ ಸುರೇಶ್ ರೈನಾ ಪೋಷಕ ಪಾತ್ರದಾರಿಯಾಗುತ್ತಿದ್ದರು. ಈ ವಿಚಾರದಲ್ಲಿ ರೈನಾ ನತದೃಷ್ಟ.
011ರ ವಿಶ್ವಕಪ್ ನಲ್ಲಿ ಸುರೇಶ್ ರೈನಾ ಅಮೂಲ್ಯ ಅಜೇಯ 36 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಆದ್ರೆ ಪಂದ್ಯ ಮುಗಿದ ಮೇಲೆ ಆಲ್ ರೌಂಡರ್ ಆಟವನ್ನಾಡಿದ್ದ ಯುವರಾಜ್ ಸಿಂಗ್ಗೆ ಗೆಲುವಿನ ಕ್ರೆಡಿಟ್ ಸಿಕ್ಕಿತ್ತು. ಹಾಗೇ 2011ರ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲೂ ಸುರೇಶ್ ರೈನಾ ಅಜೇಯ 36 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಆದ್ರೆ ಈ ಪಂದ್ಯದಲ್ಲಿ ಮಿಂಚಿನ ಆಟವನ್ನಾಡಿದ್ದ ಸಚಿನ್ ತೆಂಡುಲ್ಕರ್ ಅವರ 85 ರನ್ಗಳ ಮುಂದೆ ಸುರೇಶ್ ರೈನಾ ಅವರ 36 ರನ್ ಲೆಕ್ಕಕ್ಕೆ ಬರಲಿಲ್ಲ.
ಅಂದ ಹಾಗೇ ಸುರೇಶ್ ರೈನಾ ಟೀಮ್ ಇಂಡಿಯಾ ಪ್ರವೇಶ ಮಾಡಲು ಮುಖ್ಯ ಕಾರಣ ಮಾಜಿ ಕೋಚ್ ಗ್ರೆಗ್ ಚಾಪೆಲ್. ಉತ್ತರ ಪ್ರದೇಶದ ಗಾಝಿಯಾಬಾದ್ನ ಸುರೇಶ್ ರೈನಾ ಲಕ್ನೋ ಸ್ಪೊಟ್ರ್ಸ್ ಕಾಲೇಜ್ನ ವಿದ್ಯಾರ್ಥಿ. ರೈನಾ ಪ್ರತಿಭೆಯನ್ನು ಚಾಪೆಲ್ ಗುರುತಿಸಿದ್ರೆ, ಮಹೇಂದ್ರ ಸಿಂಗ್ ಪೋಷಣೆ ಮಾಡಿ ಬೆಂಬಲಿಸಿದ್ರು.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ರೈನಾ ಮೂರನೇ ಕ್ರಮಾಂಕದ ಆಟಗಾರ. ಆಕ್ರಮಣಕಾರಿ ಆಟವನ್ನಾಡುವ ರೈನಾಗೆ ಟೀಮ್ ಇಂಡಿಯಾದಲ್ಲಿ ಐದನೇ ಸ್ಥಾನದಲ್ಲಿ ಆಡುವ ಅವಕಾಶ ಸಿಗುತ್ತಿತ್ತು. ಅದೂ ಅಲ್ಲದೆ ವಿರಾಟ್ ಕೊಹ್ಲಿಯ ಅಬ್ಬರದ ಮುಂದೆ ಸುರೇಶ್ ರೈನಾ ಪ್ರದರ್ಶನ ಕೂಡ ಮಂಕಾಗಿಬಿಟ್ಟಿತ್ತು. ಹೆಚ್ಚಾಗಿ ಶಾರ್ಟ್ ಬಾಲ್ ಎಸೆತಗಳಿಗೆ ಔಟಾಗುತ್ತಿದ್ದ ಸುರೇಶ್ ರೈನಾ ಅವರ ಡೀಪ್ ಮಿಡ್ ವಿಕೆಟ್ ಮತ್ತು ಲಾಂಗ್ ಆನ್ ಹಾಗೂ ಎಕ್ಸ್ ಟ್ರಾ ಕವರ್ ಶಾಟ್ಸ್ ಗಳನ್ನು ನೋಡುವುದೇ ಚೆಂದ, ಅಷ್ಟೇ ಅಲ್ಲ ಈ ಹೊಡೆತಗಳು ಒಂದು ಬೌನ್ಸ್ ಆಗಿ ಸೀಮಾ ರೇಖೆ ದಾಟುತ್ತಿತ್ತು. ಇಲ್ಲವೇ ಸಿಕ್ಸರ್ ಆಗಿ ಪರಿವರ್ತನೆಯಾಗುತ್ತಿತ್ತು. ಅಷ್ಟರ ಮಟ್ಟಿಗೆ ರೈನಾ ಬ್ಯಾಟಿಂಗ್ ನಲ್ಲಿ ಪವರ್ ಇರುತ್ತಿತ್ತು.
ಇನ್ನು ಸುರೇಶ್ ರೈನಾ ಟೆಸ್ಟ್ ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಅವರು ಆಡಿರುವುದು ಕೇವಲ 18 ಟೆಸ್ಟ್ ಪಂದ್ಯಗಳನ್ನು ಮಾತ್ರ. ಅವರ ವಿಕ್ನೆಸ್ ಏನು ಎಂಬುದು ಬೌಲರ್ಗಳಿಗೆ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಅವರ ಟೆಸ್ಟ್ ಕ್ರಿಕೆಟ್ ಬದುಕಿಗೆ ಅದು ಮಾರಕವಾಗಿ ಕಾಡಿತ್ತು. ಶಾರ್ಟ್ ಬಾಲ್ ಎಸೆತಗಳಿಗೆ ಪರಿಪೂರ್ಣವಾಗಿ ಹೇಗೆ ಆಡಬೇಕು ಎಂಬುದನ್ನು ಅವರಿಗೆ ಕಲಿತುಕೊಳ್ಳಲು ಸಾಧ್ಯವಿಲ್ಲ. ಆದ್ರೆ ಸ್ಪಿನ್ನರ್ಗಳ ಎದುರು ಮಾತ್ರ ರೈನಾ ಆರ್ಭಟ ಜೋರಾಗಿಯೇ ಇರುತ್ತಿತ್ತು.
2015ರ ವಿಶ್ವಕಪ್ ನಂತರ ರೈನಾ ಫಾರ್ಮ್ ಕೂಡ ಕಳೆದುಕೊಂಡ್ರು. 2017ರಲ್ಲಿ ಯೋ ಯೋ ಟೆಸ್ಟ್ ನಲ್ಲೂ ಫೇಲ್ ಆಗಿದ್ದರು. ಬಳಿಕ 2018ರಲ್ಲಿ ಮತ್ತೆ ತಂಡವನ್ನು ಸೇರಿಕೊಂಡ್ರು. ಇಂಗ್ಲೆಂಡ್ ವಿರುದ್ದದ ಏಕದಿನ ಪಂದ್ಯದಲ್ಲಿ 46 ರನ್ ಗಳಿಸಿದ್ದರು. ಇದು ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಆ ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಧೋನಿ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ತನ್ನ 34ರ ಹರೆಯದಲ್ಲಿ ರೈನಾ ಕೂಡ ತನ್ನ ನಿವೃತ್ತಿಯ ನಿರ್ಧಾರವನ್ನು ಹೇಳಿದ್ರು.
15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸುರೇಶ್ ರೈನಾ 18 ಟೆಸ್ಟ್ ಪಂದ್ಯಗಳಲ್ಲಿ 768 ರನ್ ಗಳಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಹಾಗೂ ಏಳು ಅರ್ಧಶತಕಗಳಿವೆ. ಹಾಗೇ 226 ಏಕದಿನ ಪಂದ್ಯಗಳಲ್ಲಿ 5615 ರನ್ ಗಳಿಸಿದ್ದಾರೆ. ಇದ್ರಲ್ಲಿ ಐದು ಶತಕ ಹಾಗೂ 36 ಅರ್ಧಶತಕಗಳಿವೆ. 78 ಟಿ-ಟ್ವೆಂಟಿ ಪಂದ್ಯಗಳಲ್ಲಿ 1604 ರನ್ ಸಿಡಿಸಿದ್ದಾರೆ. ಇದ್ರಲ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳಿವೆ.
ಇನ್ನು ಬೌಲಿಂಗ್ ನಲ್ಲೂ ಮಿಂಚು ಹರಿಸಿರುವ ರೈನಾ ಟೆಸ್ಟ್ ಕ್ರಿಕೆಟ್ ನಲ್ಲಿ 13 ವಿಕೆಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ 36 ವಿಕೆಟ್ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 13 ವಿಕೆಟ್ಗಳನ್ನು ಉರುಳಿಸಿದ್ದಾರೆ. ಅಲ್ಲದೆ ಟೆಸ್ಟ್ ನಲ್ಲಿ 23 ಕ್ಯಾಚ್, ಏಕದಿನ ಕ್ರಿಕೆಟ್ ನಲ್ಲಿ 102 ಕ್ಯಾಚ್ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 42 ಕ್ಯಾಚ್ಗಳನ್ನು ಹಿಡಿದಿದ್ದಾರೆ.
ಇದೀಗ ಸುರೇಶ್ ರೈನಾ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಸಿಎಸ್ಕೆ ತಂಡಕ್ಕೆ ಧೋನಿ ತಲಾ ಅಂದ್ರೆ ದೊಡ್ಣಣ್ಣ ಅದ್ರೆ, ಸುರೇಶ್ ರೈನಾ ಚಿನ್ನಾ ತಲಾ.. ಚಿಕ್ಕಣ್ಣನಾಗಿದ್ದಾರೆ. ಒಟ್ಟಿನಲ್ಲಿ ಸುರೇಶ್ ರೈನಾ ಅವರ ಪ್ರತಿಭೆ ಟೀಮ್ ಇಂಡಿಯಾದಲ್ಲಿ ಸರಿಯಾಗಿ ಬಳಕೆಯಾಗಿಲ್ಲ ಎಂಬುದು ಮಾತ್ರ ದುರಾದೃಷ್ಟವೇ ಸರಿ.