ಟೀಮ್ ಇಂಡಿಯಾಕ್ಕೆ ಕಾಂಬಿನೇಷನ್ ತಲೆಬಿಸಿ, ಸೂರ್ಯಕುಮಾರ್ ಫಾರ್ಮ್ ಬಗ್ಗೆ ತಲೆಕೆಡಿಸಿಕೊಂಡ ಕೊಹ್ಲಿ
ಸೂರ್ಯ ಕುಮಾರ್ ಯಾದವ್ ಐಪಿಎಲ್ ನಿಂದ ಹುಟ್ಟಿಕೊಂಡ ಪ್ರತಿಭೆ. ಲೇಟ್ ಆದರೂ ಲೇಟೆಸ್ಟ್ ಆಗಿ ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟವರ ಪೈಕಿ ಸೂರ್ಯ ಕುಮಾರ್ ಯಾದವ್ ಕೂಡ ಒಬ್ಬರು. ಟೀಮ್ ಇಂಡಿಯಾ ಪರ ಆಡಿದ್ದ ಪಂದ್ಯಗಳಲ್ಲಿ ಸೂರ್ಯ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಐಪಿಎಲ್ 14ನೇ ಆವೃತ್ತಿಯ ಫಸ್ಟ್ ಇನ್ನಿಂಗ್ಸ್ ನಲ್ಲೂ ಸೂರ್ಯ ಬ್ಯಾಟಿಂಗ್ ಸಖತ್ ಅಗಿತ್ತು. ಹೀಗಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಬಳಿಕ ಸೂರ್ಯ ಫಾರ್ಮ್ ಕಳೆದುಕೊಂಡಿದ್ದಾರೆ. ಇದು ಟೀಮ್ ಇಂಡಿಯಾಕ್ಕೆ ತಲೆನೋವು ತಂದಿದೆ.
ಐಪಿಎಲ್ ಯುಎಇ ಆವೃತ್ತಿಯಲ್ಲಿ ಸೂರ್ಯ ಕುಮಾರ್ ಬೆನ್ನು ಬೆನ್ನಿಗೆ ವೈಫಲ್ಯ ಅನುಭವಿಸಿದ್ದರು. ರಾಜಸ್ಥಾನ ರಾಯಲ್ಸ್ ವಿರುದ್ಧ ಒಂದು ದೊಡ್ಡ ಇನ್ನಿಂಗ್ಸ್ ಕಟ್ಟಿದ್ದು ಬಿಟ್ಟರೆ ಉಳಿದಿದ್ದೆಲ್ಲವೂ ವೈಫಲ್ಯಗಳ ಸರಮಾಲೆ. ಸೂರ್ಯಕುಮಾರ್ ಬದಲು ಶ್ರೇಯಸ್ ಅಯ್ಯರ್ ಗೆ ಸ್ಥಾನ ನೀಡಿ ಅನ್ನುವ ಚರ್ಚೆಯೂ ನಡೆದಿತ್ತು. ಆದರೆ ಬಿಸಿಸಿಐ ಮಾತ್ರ ಸೂರ್ಯ ಕುಮಾರ್ ಗೆ ಅವಕಾಶ ನೀಡಿದೆ.
ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೂರ್ಯ ಕುಮಾರ್ ಮಿಂಚಬಹುದು ಅನ್ನುವ ನಂಬಿಕೆ ಇತ್ತು. ಆದರೆ ಅದು ಸುಳ್ಳಾಗಿದೆ. ಸೂರ್ಯ 8 ರನ್ ಗೆ ಔಟಾಗಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅವಕಾಶ ಸಿಗುತ್ತಾ ಅನ್ನುವ ಬಗ್ಗೆ ಅನುಮಾನವಿದೆ. ಅಷ್ಟೇ ಅಲ್ಲ ಸೂರ್ಯ ಕುಮಾರ್ ವಿಶ್ವಕಪ್ ಯಾತ್ರೆ ಬೆಂಚ್ ಕಾಯಿಸುವುದರಲ್ಲೇ ಮುಗಿಯುತ್ತಾ ಅನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.