ಪಾಟ್ನಾ: ಯಾರ ಕಣ್ಣ ಬಿತ್ತು ನಮ್ಮ ಪ್ರೀತಿ ಮ್ಯಾಲೆ…ನಮ್ಮ ಪ್ರೀತಿ ಮ್ಯಾಲೆ…ಎಂಬ ಹಾಡಿಗೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಜ್ವಲಂತ ಸಾಕ್ಷಿಯಾಗಿದ್ದಾರೆ.
ಮಾಯಾನಗರಿ ಮುಂಬೈನ ಅಪಾರ್ಟ್‍ಮೆಂಟ್‍ನಲ್ಲಿ ಸುಶಾಂತ್ ಸಿಂಗ್ ರಜಪೂತ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ರಹಸ್ಯ ನಿಗೂಢವಾಗುತ್ತಲೇ ಹೋಗುತ್ತಿದೆ.
ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ಹಸನ್ಮುಖಿ ತರುಣನ ಸಾವಿನ ಸುದ್ದಿ ಕೇಳಿದ ಪ್ರತಿಯೊಬ್ಬರೂ ಬೇಸರಪಟ್ಟುಕೊಂಡಿದ್ದಾರೆ. ಬಾಲಿವುಡ್‍ನಲ್ಲಿ ಈಗಷ್ಟೇ ಹೆಸರು ಗಳಿಸಲು ಹೆಜ್ಜೆ ಹಾಕುತ್ತಿದ್ದ ಸುಶಾಂತ್, ಬಾಲಿವುಡ್‍ನ ಧೋನಿ ಎಂತಲೇ ಹೆಸರು ಮಾಡಿದ್ದರು.
ಆದರೀಗ, ಸುಶಾಂತ್ ಇಲ್ಲದ ಮನೆಯಲ್ಲಿ ನೀರವ ಮೌನ. ಸದಾ ಸಂಭ್ರಮದಿಂದ ಕೂಡಿರುತ್ತಿದ್ದ ಮನೆಯಲ್ಲಿ ಮೌನವೇ ಎಲ್ಲ. ಅಣ್ಣನ ಸಾವಿನ ಆಘಾತದಿಂದ ಹೊರಬರಲು ಸಹೋದರಿ ಶ್ವೇತಾ ಸಿಂಗ್ ಕೀರ್ತಿ ತಾವು ಕಳೆದ ಸಂತಸದ ಕ್ಷಣಗಳ ಫೋಟೋಗಳನ್ನು ಸೋಷಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದಾರೆ.
ಒಂದು ಕಪ್ ಟೀ ಕುಡಿಯುವಾಗಲು ಎಲ್ಲರೂ ಒಟ್ಟಿಗೆ ಕುಳಿತು ಆ ಕ್ಷಣವನ್ನು ಹೇಗೆ ಎಂಜಾಯ್ ಮಾಡುತ್ತಿದ್ದೆವು ಎಂದು ಬರೆದುಕೊಂಡಿದ್ದಾರೆ.
ಕಳೆದ ಶನಿವಾರ 13ನೇ ದಿನದ ಕಾರ್ಯವನ್ನು ಬಿಹಾರ ರಾಜಧಾನಿ ಪಾಟ್ನಾದ ನಿವಾಸದಲ್ಲಿ ನೆರವೇರಿಸಲಾಯಿತು. ಮನೆಯ ಹಾಲ್‍ನಲ್ಲಿ ಸುಶಾಂತ್ ಫೋಟೋ ಇಟ್ಟು ವಿಧಿವಿಧಾನ ನೆರವೇರಿಸಿ ಬಳಿಕ ತಂದೆ ಹಾಗೂ ಕುಟುಂಬ ಸದಸ್ಯರು ಧ್ಯಾನ ಮಾಡಿ ನೋವಿನಿಂದ ಹೊರ ಬರುವ ಪ್ರಯತ್ನ ಮಾಡಿದ್ದಾರೆ. ಕೇವಲ 34ರ ಹರೆಯದಲ್ಲೇ ಇಹಲೋಕ ತ್ಯಜಿಸಿದ ಸುಶಾಂತ್ ಸಿಂಗ್‍ಗೆ ಭಾವನಾತ್ಮಕ ಪದಗಳ ಮೂಲಕ ನುಡಿನಮನ ಸಲ್ಲಿಸಿದ್ದಾರೆ ಸಹೋದರಿ ಶ್ವೇತಾ.

” ಪ್ರೀತಿ ಮತ್ತು ಸಕಾರಾತ್ಮಕತೆಯನ್ನೇ ತುಂಬಿಕೊಂಡಿದ್ದ ನನ್ನ ಚಿಕ್ಕ ಸಹೋದರನೇ ನೀನು ಎಲ್ಲಿದ್ದರೂ, ಯಾವಾಗಲೂ ಸಂತೋಷವಾಗಿರು ಎಂದು ಭಾವಿಸುತ್ತೇವೆ ….ನಾವು ಯಾವಾಗಲೂ ನಿಮ್ಮನ್ನು ಶಾಶ್ವತತೆಗಾಗಿ ಪ್ರೀತಿಸುತ್ತೇವೆ ” #sushantsinghrajput








