ದಾವಣಗೆರೆ: ವ್ಯಕ್ತಿಯೊಬ್ಬಾತ ಪತ್ನಿಯ ಮೇಲೆ ಅನುಮಾನ ಪಟ್ಟು ತನ್ನ ಹಳೆಯ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರ ಬಳಿಯ ಚನ್ನಾಪುರ ಎಂಬಲ್ಲಿ ನಡೆದಿದೆ. ಸಂತೋಷ್ ಕೊಲೆ (Murder)ಯಾಗಿರುವ ವ್ಯಕ್ತಿ. ರಂಗಸ್ವಾಮಿ ಕೊಲೆ ಮಾಡಿದ ವ್ಯಕ್ತಿಯಾಗಿದ್ದರೆ, ಪತ್ನಿ ರೂಪಾ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸ್ ಶ್ವಾನವು ಕೊಲೆ ಆರೋಪಿಯನ್ನು ಪತ್ನಿಯ ಮೇಲೆ ಹಲ್ಲೆ ನಡೆಸುವಾಗಿ ಪತ್ತೆ ಹಚ್ಚಿದೆ. ಈ ಮೂಲಕ ನಾಯಿಯಿಂದಾಗಿ ರೂಪ ಪ್ರಾಣ ಉಳಿಸಿಕೊಂಡಿದ್ದಾರೆ.
ರೂಪಾ, ತನ್ನೂರಿನ ಪಕ್ಕದ ಸಂತೆಬೆನ್ನೂರಿನಲ್ಲಿ ಬ್ಯುಟಿ ಪಾರ್ಲರ್ ನಡೆಸುತ್ತಿದ್ದಳು. ಅದೇ ಗ್ರಾಮದ ನಿವಾಸಿ ಸಂತೋಷ್ ಗಾರೆ ಕೆಲಸ ಮಾಡಿಕೊಂಡಿದ್ದ. ಈತ ರೂಪಾಳ ಹಳೆಯ ಪ್ರೇಮಿ. ಮದುವೆಯಾದ ನಂತರವೂ ಇವರಿಬ್ಬರ ಸ್ನೇಹ ಮುಂದುವರೆದಿದೆ ಎನ್ನಲಾಗಿದೆ. ರಂಗಸ್ವಾಮಿಗೆ ಇವರಿಬ್ಬರ ಮಧ್ಯೆ ಅನೈತಿಕ ಸಂಬಂಧ ಇದೆ ಎಂಬ ಸಂಶಯ ಬಂದಿದೆ. ಇದೇ ಕೋಪದಲ್ಲಿ ರಂಗಸ್ವಾಮಿ ಮಚ್ಚಿನಿಂದ ಹೊಡೆದು ಸಂತೋಷ್ ನನ್ನು ಸಂತೆಬೆನ್ನೂರಿನಲ್ಲಿ ಕೊಲೆ ಮಾಡಿದ್ದಾನೆ. ಸಂತೋಷ್ ಕೊಲೆಯಾಗುತ್ತಿದ್ದಂತೆ ಪತ್ನಿಯ ಕೊಲೆಗೆ ಚನ್ನಾಪುರಕ್ಕೆ ಬಂದಿದ್ದಾನೆ.
ಪತ್ನಿಗೆ ಹಿಂಸೆ ನೀಡಲು ಆರಂಭಿಸುತ್ತಿದ್ದಂತೆ ಪೊಲೀಸರು ಶ್ವಾನದೊಂದಿಗೆ ಚನ್ನಾಪುರಕ್ಕೆ ಹೋಗಿದ್ದು ಪೊಲೀಸ್ ಶ್ವಾನ ಆರೋಪಿಯನ್ನು ಪತ್ತೆ ಹಚ್ಚಿದೆ. ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಆರೋಪಿ ಸಿಕ್ಕಿಬಿದ್ದಿದ್ದಾನೆ. ತನ್ನೂರಿನಿಂದ ಸಂತೆಬೆನ್ನೂರಿಗೆ ಬಂದು ಬ್ಯುಟಿಪಾರ್ಲರ್ ನಡೆಸುತ್ತ ಅದೇ ಊರಿನ ಸಂತೋಷ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂಬ ಆರೋಪ ರೂಪಾಳ ಮೇಲಿದೆ. ಸದ್ಯ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.