ಯಾದಗಿರಿ: ಯಾದಗಿರಿ (Yadgiri) ನಗರ ಠಾಣೆಯಲ್ಲಿ ವರ್ಗಾವಣೆಗೊಂಡಿದ್ದ ಪಿಎಸ್ ಐ ಹೃದಯಾಘಾತಕ್ಕೆ ಬಲಿಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಪಿಎಸ್ಐ ಪರಶುರಾಮ (PSI Parashuram) (34) ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪಿಎಸ್ ಐ ಪರಶುರಾಮ ಕಳೆದ ಮೂರು ವರ್ಷಗಳಿಂದ ಯಾದಗಿರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಶುಕ್ರವಾರ ರಾತ್ರಿ ಮನೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪರಶುರಾಮ ಅವರ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ (Congress MLA Chennareddy Patil) ಮತ್ತು ಪುತ್ರ ಪಂಪಣ್ಣಗೌಡ ಕಾರಣ ಎಂದು ಪಿಎಸ್ ಐ ಪತ್ನಿ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ಪಿಎಸ್ ಐ ಪರಶುರಾಮ್ ಯಾದಗಿರಿ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಅವರು ಸೇವೆ ಸಲ್ಲಿಸುತ್ತಿದ್ದರು. ಆದರೆ, ಈಗ ಮತ್ತೆ ವರ್ಗಾವಣೆಯಾಗಿದ್ದಕ್ಕೆ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಯಾದಗಿರಿ ನಗರ ಠಾಣೆಗೆ ಪೋಸ್ಟಿಂಗ್ ಗಾಗಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಪರಶುರಾಮ 30 ಲಕ್ಷ ರೂ. ನೀಡಿ, ಯಾದಗಿರಿ ನಗರಕ್ಕೆ ವರ್ಗಾವಣೆಯಾಗಿದ್ದರು. ಆದರೆ, ಒಂದು ವರ್ಷದ ಪೂರೈಸುವ ಮುನ್ನವೇ ಪರಶುರಾಮ್ ಅವರನ್ನು ಮತ್ತೆ ಯಾದಗಿರಿ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಅವರು ಒತ್ತಡಕ್ಕೆ ಒಳಗಾಗಿದ್ದರು. 30 ಲಕ್ಷ ನೀಡಿದ ವೇಳೆ ಸಾಲ ಮಾಡಿದ್ದರು. ಈಗ ವರ್ಗಾವಣೆಯಾಗಿದ್ದಕ್ಕೆ ತೀವ್ರ ಆತಂಕಗೊಂಡಿದ್ದರು. ಹೀಗಾಗಿ ಅವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪಿಎಸ್ಐ ಪರಶುರಾಮ ಸಾವಿಗೆ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಪುತ್ರ ಪಂಪಣ್ಣಗೌಡ ಕಾರಣವೆಂದು ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ದೂರು ದಾಖಲಿಸಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ಪದೇ ಪದೇ ಹಣಕ್ಕೆ ಕಿರುಕುಳ ನೀಡುತ್ತಿದ್ದರು. ನಾವು ದಲಿತರು, ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಶಾಸಕರು ಪೋಸ್ಟಿಂಗ್ ಕೊಟ್ಟಿಲ್ಲ. ಶ್ವೇತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರ ಬಳಿ ದೂರು ನೀಡಿದ್ದಾರೆ.
ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿಗೆ ದುಡ್ಡಿನ ಆಸೆ ಹೆಚ್ಚಾಗಿದೆ. ಯಾದಗಿರಿ ಠಾಣೆಯಿಂದ ಅವಧಿ ಪೂರ್ವ ವರ್ಗಾವಣೆ ಮಾಡಿದ್ದಾರೆ. ಅವಧಿ ಪೂರ್ವ ವರ್ಗಾವಣೆಯಿಂದ ಪಿಎಸ್ಐ ಪರಶುರಾಮ ನೊಂದಿದ್ದರು. ಏಳು ತಿಂಗಳ ಅವಧಿಯಲ್ಲಿ ಶಾಸಕರು ಬೇರೆಯವರಿಗೆ ಪೋಸ್ಟಿಂಗ್ ನೀಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ತಪ್ಪಿತಸ್ಥ ಎಂಎಲ್ಎ ಚನ್ನಾರೆಡ್ಡಿ ಪಾಟೀಲ್ರನ್ನು ಬಂಧಿಸುವಂತೆ ವಿವಿಧ ದಲಿತ ಪರ ಸಂಘಟನೆಗಳು ಮತ್ತು ಮೃತ ಪಿಎಸ್ಐ ಪರಶುರಾಮ ಕುಟುಂಬಸ್ಥರು ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಪ್ರತಿಭಟನೆ ನಡೆಸಿದ್ದಾರೆ.








