ಗುರುಗ್ರಾಮ: ಮಹಾಮಾರಿ ಕೊರೊನಾ ರಣಕೇಕೆ ನಡುವೆಯೇ ಮಹಾರಾಷ್ಟ್ರ, ಗುಜರಾತ್, ಪಂಜಾಬ್ ರಾಜ್ಯಗಳ ರೈತರ ನಿದ್ದೆಗೆಡಿಸಿ ಬೆಳೆ ಸ್ವಾಹ ಮಾಡಿದ್ದ ರಕ್ಕಸ ಮಿಡತೆಗಳು, ಈಗ ಹರಿಯಾಣ ರಾಜ್ಯದ ಗುರುಗ್ರಾಮದ ಮೇಲೆ ದಾಳಿ ಮಾಡಿವೆ.

ಗುರುಗ್ರಾಮದ ಸೈಬರ್ ಹಬ್ ಪ್ರದೇಶದಲ್ಲಿ ಮನೆಗಳು, ಮರ-ಗಿಡಗಳ ಮೇಲೆಲ್ಲಾ ಲಕ್ಷಾಂತರ ಸಂಖ್ಯೆಯಲ್ಲಿ ಕುಳಿತಿರುವ ಭಕ್ಷಕ ಮಿಡತೆಗಳ ಕಂಡು ಜನರು ಆತಂಕಗೊಂಡಿದ್ದಾರೆ.
ಈ ರಕ್ಕಸ ಮಿಡತೆಗಳ ಮುಂದಿನ ಟಾರ್ಗೆಟ್, ರಾಷ್ಟ್ರ ರಾಜಧಾನಿ ದೆಹಲಿ ಎನ್ನಲಾಗುತ್ತಿದೆ. ಗುರುಗ್ರಾಮ ದೆಹಲಿಗೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಇವುಗಳ ದೆಹಲಿ ಮಾರ್ಗವಾಗಿ ಸಂಚರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುಗ್ರಾಮದ ನಿವಾಸಿಗಳು ಮನೆಯ ಬಾಗಿಲು, ಕಿಟಕಿಗಳನ್ನು ತೆರೆಯಬಾರದು. ಅನಗತ್ಯವಾಗಿ ಓಡಾಡಬಾರದು. ಮನೆಯಲ್ಲಿರುವ ತಟ್ಟೆ ಹಾಗೂ ಪಾತ್ರೆಗಳನ್ನು ತೆಗೆದುಕೊಂಡು ಶಬ್ದ ಮಾಡುವ ಮೂಲಕ ಮಿಡತೆಗಳನ್ನು ಓಡಿಸಿ ರಕ್ಷಿಸಿಕೊಳ್ಳಿ ಎಂದು ಗುರುಗ್ರಾಮ ಜಿಲ್ಲಾಡಳಿತ ಸೂಚನೆ ನೀಡಿದೆ.
ಜತೆಗೆ, ಗುರುಗ್ರಾಮ ಜಿಲ್ಲೆಯ ರೈತರು ಮಿಡತೆಗಳ ದಾಳಿ ತಡೆಯಲು ಕ್ರೀಟನಾಶಕ ಸಿಂಪರಣೆ ಜತೆಗೆ ಪಂಪ್ಗಳನ್ನು ಆನ್ ಮಾಡಿ ನೀರು ಸದಾ ಬೆಳೆಗಳ ಮೇಲೆ ಸ್ಪ್ರೇ ಆಗುತ್ತಿರುವಂತೆ ನೋಡಿಕೊಳ್ಳಿ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ರಿಕಾದಿಂದ ಇರಾನ್, ಪಾಕಿಸ್ತಾನ ಮೂಲಕ ಭಾರತಕ್ಕೆ ಲಗ್ಗೆ ಇಟ್ಟಿರುವ ರಕ್ಕಸ ಮಿಡತೆಗಳು, ದೇಶದ ರೈತರ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಫಸಲನ್ನು ನುಂಗಿ ನೀರು ಕುಡಿದಿವೆ.








