ಸೈಯ್ಯದ್ ಮುಷ್ತಾಕ್ ಆಲಿ ಟ್ರೋಫಿ – ಪ್ರಶಸ್ತಿಗಾಗಿ ಕರ್ನಾಟಕ – ತಮಿಳುನಾಡು ಫೈಟ್
ಪ್ರತಿಷ್ಠಿತ ಸೈಯ್ಯದ್ ಮುಷ್ತಾಕ್ ಆಲಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಹೋರಾಟ ನಡೆಸಲಿವೆ.
ದೆಹಲಿಯ ಅರುಣ್ ಜೆಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಜಿದ್ದಾಜಿದ್ದಿನಿಂದ ಸಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈಗಾಗಲೇ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ತಲಾ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ. ಇದೀಗ ಉಭಯ ತಂಡಗಳು ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿವೆ.
ಕಳೆದ ಬಾರಿ ತಮಿಳುನಾಡು ತಂಡ ಬರೋಡಾ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಹಾಗೇ ಈ ಬಾರಿಯೂ ಕರ್ನಾಟಕದ ವಿರುದ್ಧ ಸೇಡು ತೀರಿಸಿಕೊಂಡು ಪ್ರಶಸ್ತಿಯನ್ನು ಉಳಿಸಿಕೊಳ್ಳುವತ್ತ ಚಿತ್ತವನ್ನು ನೆಟ್ಟಿದೆ.
2006ರ ಮೊದಲ ಆವೃತ್ತಿಯಲ್ಲಿ ತಮಿಳುನಾಡು ತಂಡ ಪಂಜಾಬ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನಾದಾಗಿಸಿಕೊಂಡಿತ್ತು. ನಂತರ 15 ವರ್ಷಗಳ ನಂತರ ಪ್ರಶಸ್ತಿ ಗೆದ್ದುಕೊಂಡಿತ್ತು.
ಹಾಗೇ ಕರ್ನಾಟಕ ತಂಡ 2018 ಮತ್ತು 2019ರಲ್ಲಿ ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.
ತಮಿಳುನಾಡು ತಂಡವನ್ನು ವಿಜಯ ಶಂಕರ್ ಅವರು ಮುನ್ನಡೆಸಿದ್ರೆ, ಕರ್ನಾಟಕ ತಂಡಕ್ಕೆ ಮನೀಷ್ ಪಾಂಡೆ ಸಾರಥ್ಯ ವಹಿಸಿದ್ದಾರೆ.