ಮೃತ ಪತ್ನಿ3 ದಿನದ ಬಳಿಕ ಬದುಕಿ ಬರುತ್ತಾಳೆಂದು ಪ್ರಾರ್ಥಿಸಿದ ಪತಿ….
ಮೃತ ಪತ್ನಿ ಮೂರನೇ ದಿನ ಬದುಕಿ ಬರುತ್ತಾಳೆ ಎಂಬ ನಂಬಿಕೆಯಿಂದ ಪತಿಯೊಬ್ಬ ತನ್ನ ಇಬ್ಬರು ಪುತ್ರರೊಂದಿಗೆ ಕಳೆಬರಹದ ಎದುರು ವಿಶೇಷವಾಗಿ ಪ್ರಾರ್ಥಿಸಿರುವ ಘಟನೆ ತಮಿಳು ನಾಡಿನ ಮಧುರೈನಲ್ಲಿ ನಡೆದಿದೆ.
ತಿರುನಲ್ವೇಲಿ ಜಿಲ್ಲೆಯ ಕಳಕ್ಕಾಡು ಬಳಿಯ ಚಿದಂಬರಾಯಪುರಂ ಪ್ರದೇಶದವರಾದ ಬಾಲಕೃಷ್ಣನ್ ಅವರು ತಮ್ಮ ಪತ್ನಿ ಮಾಲತಿ ಮತ್ತು ಇಬ್ಬರು ಪುತ್ರರೊಂದಿಗೆ ಮಧುರೈ ಎಸ್‌ಎಸ್ ಕಾಲೋನಿಯ ಜಾನಕಿ ನಾರಾಯಣನ್ ಸ್ಟ್ರೀಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಬಾಲಕೃಷ್ಣನ್ ಹೋಟೆಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಹಿರಿಯ ಮಗ ಜಯಶಂಕರ್ ವೈದ್ಯಕೀಯ ಕೋರ್ಸ್ ಮುಗಿಸಿದ್ದು, ಎರಡನೇ ಮಗ ಶಿವಶಂಕರ್ ಎಂಬಿಬಿಎಸ್ ಮೂರನೇ ವರ್ಷ ಓದುತ್ತಿದ್ದಾನೆ.
ಕೆಲ ಸಮಯದ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಬಾಲಕೃಷ್ಣನ್ ಪಾದ್ರಿಯಾಗಿದ್ದಾರೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ಬಾಲಕೃಷ್ಣನ್ ಅವರ ಪತ್ನಿ ಮಾಲತಿ ಅಸ್ವಸ್ಥರಾಗಿದ್ದ ಕಾರಣ ಮಧುರೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 8 ರಂದು ಮುಂಜಾನೆ ಮೃತಪಟ್ಟಿದ್ದಾರೆ.
ಕುಟುಂಬ ಸದಸ್ಯರು ಶವವನ್ನು ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಕೊಂಡೊಯ್ದು ಐಸ್ ಬಾಕ್ಸ್‌ನಲ್ಲಿ ಶವವನ್ನ ಇರಿಸಿದ್ದಾರೆ. ಮರುದಿನ ಮೃತದೇಹವನ್ನ ಸುಡದೇ ಇದ್ದುದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಸ್ ಎಸ್ ಕಾಲೋನಿ ಪೊಲೀಸರು ಬಾಲಕೃಷ್ಣನನ್ನ ವಿಚಾರಣೆಗೊಳಪಡಿಸಿದಾಗ ದೂರದಿಂದ ಸಂಬಂಧಿಕರು ಬರಬೇಕಾಗಿದೆ ಎಂದು ತಿಳಿಸಿದ್ದಾರೆ.
ಮೂರನೇ ದಿನವೂ ಶವ ತೆಗೆಯದ ಕಾರಣ ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಬಾಲಕೃಷ್ಣನ ಮನೆಗೆ ತೆರಳಿದ್ದರು. ಮನೆಯ ಹೊರಗೆ ಪೊಲೀಸರನ್ನು ತಡೆದ ಬಾಲಕೃಷ್ಣನ್, ಮನೆ ಪ್ರವೇಶಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿ ಬಾಗಿಲು ಹಾಕಿಕೊಂಡು ಪತ್ನಿಯ ಶವ ಇಟ್ಟಿದ್ದ ಪೆಟ್ಟಿಗೆಯಲ್ಲಿ ಇಬ್ಬರು ಪುತ್ರರೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ಸಾವನ್ನಪ್ಪಿದ್ದ ಪತ್ನಿ ಮೂರು ದಿನಗಳ ನಂತರ ಮತ್ತೆ ಬದುಕಿ ಬರುತ್ತಾಳೆ ಎಂಬ ಮೂಡನಂಬಿಕೆಯಿಂದ ಬಾಲಕೃಷ್ಣನ್ ತನ್ನ ಇಬ್ಬರು ಪುತ್ರರೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದು, ಮೂರನೇ ದಿನವೂ ಎಚ್ಚರವಾಗದಿದ್ದಾಗ ಮೃತ ದೇಹದ ಅಂತಿಮ ವಿಧಿವಿಧಾನಗಳನ್ನ ನೆರವೇರಿಸಲಾಗಿದೆ.
ಪತಿ ಬಾಲಕೃಷ್ಣ ಜೊತೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಪುತ್ರರು ಇಂತಹ ಮೂಡನಂಬಿಕೆಯಲ್ಲಿ ಬಿದ್ದದ್ದು, ಆಶ್ಚರ್ಯವೆನಿಸುತ್ತಿದೆ.
Tamil Nadu: The husband prayed that his dead wife would come alive after 3 days.








