ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆಯಲ್ಲ : ಸಿದ್ದುಗೆ ತನ್ವೀರ್ ಟಾಂಗ್
ಮೈಸೂರು : ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆಯಲ್ಲ. ಇತ್ತೀಚೆಗೆ ವ್ಯಕ್ತಿ ಪೂಜೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳದೆ ತನ್ವೀರ್ ಸೇಠ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಮೇಯರ್ ಚುನಾವಣೆ ಕಾಂಗ್ರೆಸ್ ನಲ್ಲಿ ಸಂಚನಲ ಮೂಡಿದೆ. ಇಷ್ಟು ಒಳಗೊಳಗೆ ಕುದಿಯುತ್ತಿದ್ದ ಅಸಮಾಧಾನಧ ಜ್ವಾಲೆ ಈಗ ಸಣ್ಣದಾಗಿ ಸ್ಫೋಟಿಸುತ್ತಿದೆ. ತಮಗೆ ತಿಳಿಸದೇ ಮೈಸೂರಿನಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾರಣವಾಗಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತನ್ವೀರ್ ಸೇಠ್ ವಿರುದ್ಧ ಗರಂ ಆಗಿದ್ದಾರೆ. ಹೀಗಾಗಿ ಪಕ್ಷದಲ್ಲಿ ಎರಡು ಬಣಗಳಾಗಿವೆ ಅನ್ನೋದು ರಾಜಕೀಯವಲಯದಲ್ಲಿ ಹರಿದಾಡುತ್ತಿರುವ ಮಾತುಗಳು.
ಅದರಲ್ಲೂ ಜೆಡಿಎಸ್ ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟ ವಿಚಾರವಾಗಿ ತನ್ವೀರ್ ಸೇಠ್ ಅವರನ್ನ ಅಮಾನತು ಮಾಡಲು ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಇದೀಗ ತನ್ವೀರ್ ಮಾತನಾಡಿದ್ದು, ನಾನು ಯಾವುದಕ್ಕೂ ಹೆದರುವುದಿಲ್ಲ, ಅಮಾನತು ಮಾಡಿದರೂ ಸಿದ್ಧವಾಗಿದ್ದೇನೆ. ನಾನು ಸಹ 5 ಬಾರಿ ಗೆದ್ದಿದ್ದೇನೆ. ಒಬ್ಬರ ಗೌರವ ಕಾಪಾಡಲು ಎಲ್ಲರ ಗೌರವ ಹರಾಜು ಹಾಕಲು ಆಗುವುದಿಲ್ಲ. ಪದೇ ಪದೆ ನನ್ನ ತೇಜೋವಧೆ ಮಾಡಿ ನನ್ನ ಲೋಪ ಅಂತಾ ಹೇಳುವುದು ಸರಿ ಅಲ್ಲ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆಯಲ್ಲ. ಇತ್ತೀಚೆಗೆ ವ್ಯಕ್ತಿ ಪೂಜೆ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ರು.
ಇನ್ನು ನನ್ನ ವಿರುದ್ಧ ಕ್ರಮ ಕೈಗೊಂಡರೆ ಅದರ ಪರಿಣಾಮ ಎದುರಿಸಲು ಸಿದ್ಧನಾಗಿದ್ದೇನೆ. ನಾನು ಮಾರಾಟದ ವಸ್ತುವಲ್ಲ. ರಾಜಕೀಯ ತತ್ವ, ಸಿದ್ಧಾಂತ ಉಳಿಸಿಕೊಂಡಿದ್ದೇನೆ, ಅದಕ್ಕಾಗಿ ಹಲವು ತ್ಯಾಗ ಮಾಡಿದ್ದೇನೆ ಎಂದು ತನ್ವೀರ್ ಸೇಠ್ ಜೆಡಿಎಸ್ ಜೊತೆ ಕೈ ಜೋಡಿಸಿದ್ದಾರೆ ಅನ್ನೋ ಆರೋಪಕ್ಕೆ ಸ್ಪಷ್ಟನೆ ನೀಡಿದರು.
